ಬೆಂಗಳೂರು: ನಾಳೆ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರವು ಒಂದು ಗಂಟೆ ತಡವಾಗಿ ಆರಂಭವಾಗಲಿದೆ ಅಂತ ಬಿಎಂಆರ್ ಸಿಎಲ್ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಯಾಣಿಕರಿಗೆ ತಿಳಿಸುವುದೇನೆಂದರೆ, ಕಾರ್ಯಾಚರಣೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ತುರ್ತು ವ್ಯವಸ್ಥಾ ನಿರ್ವಹಣೆ / ನವೀಕರಣ ಕಾರ್ಯಗಳ ಹಿನ್ನೆಲೆಯಲ್ಲಿ 21 ಡಿಸೆಂಬರ್ 2025 (ಭಾನುವಾರ) ರಂದು ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾಗಲಿವೆ ಎಂದಿದೆ.
ಈ ಹಿನ್ನೆಲೆಯಲ್ಲಿ, ಹಳದಿ ಮಾರ್ಗದಲ್ಲಿ ಮೊದಲ ರೈಲು ಸೇವೆ ಬೆಳಿಗ್ಗೆ 7.00 ಗಂಟೆಯ ಬದಲಾಗಿ ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭವಾಗಿದ್ದು, ನಂತರ ಭಾನುವಾರದ ಸಾಮಾನ್ಯ ವೇಳಾಪಟ್ಟಿಯಂತೆ ಕಾರ್ಯಾಚರಿಸಲಿದೆ. ಈ ಬದಲಾವಣೆ ಕೇವಲ ಒಂದು ದಿನಕ್ಕೆ ಮಾತ್ರ ಅನ್ವಯವಾಗಿದ್ದು, ಅಂದರೆ 21.12.2025 ರಂದು ಹಳದಿ ಮಾರ್ಗಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿದೆ.
ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ಪ್ರಯಾಣಿಕರಿಗೆ ಉಂಟಾಗುವ ಯಾವುದೇ ಅಸೌಕರ್ಯಕ್ಕೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರಿಂದ ನಿರಂತರ ಸಹಕಾರ ಮತ್ತು ಸಹನೆಯನ್ನು ಕೋರಿದೆ.








