ಬೆಂಗಳೂರು: ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈ ವಾರಾಂತ್ಯದೊಳಗೆ ಪ್ರಕಟವಾಗುವ ಸಾಧ್ಯತೆ ಇದೆ.
ಏಪ್ರಿಲ್ 16ರಂದು ಭೌತವಿಜ್ಞಾನ, ರಸಾಯನ ವಿಜ್ಞಾನ, ಏಪ್ರಿಲ್ 17ರಂದು ಗಣಿತ ಮತ್ತು ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳನ್ನು 775 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಗಡಿನಾಡು ಮತ್ತು ಹೊರನಾಡು ಕನ್ನಡಿಗ ಅಭ್ಯರ್ಥಿಗಳಿಗೆ 15 ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. ಕೇರಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿದ್ದರು. ಕೇರಳ ಪದವಿ ಪೂರ್ವ ಶಿಕ್ಷಣ ಇಲಾಖೆ ಮೇ 21ರಂದು ಪಿಯು ಫಲಿತಾಂಶ ಪ್ರಕಟಿಸಲಿದ್ದು, ಫಲಿತಾಂಶ ಪ್ರಕಟವಾದ ಒಂದು ಅಥವಾ ಎರಡು ದಿನದಲ್ಲಿ ಸಿಇಟಿ ರ್ಯಾಂಕಿಂಗ್ ಬಿಡುಗಡೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಂಡಿದೆ.
ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಮತ್ತು ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾದ ಬಳಿಕ ಸಿಇಟಿ ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರು. ಅದರಂತೆ ಈಗಾಗಲೇ ಈ ಫಲಿತಾಂಶಗಳು ಪ್ರಕಟವಾಗಿವೆ. ಈ ಫಲಿತಾಂಶ ಪರಿಗಣಿಸಿ ಸಂಬಂಧಿಸಿದ ವಿದ್ಯಾರ್ಥಿಗಳ ಸಿಇಟಿ ಯಾಂಕಿಂಗ್ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ, ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆ ಬಳಿಕ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ-2 ಬರೆದಿದ್ದ 71 ಸಾವಿರ ವಿದ್ಯಾರ್ಥಿಗಳಲ್ಲಿ 41 ಸಾವಿರ ಮಂದಿ ಫಲಿತಾಂಶ ಉತ್ತಮಗೊಂಡಿದೆ. ಇದರಲ್ಲಿ ಬಹುತೇಕ ಮಂದಿ ವಿಜ್ಞಾನ ವಿಭಾಗದವರಾಗಿದ್ದು, ಅವರ ಉತ್ತಮಗೊಂಡಿರುವ ಫಲಿತಾಂಶವನ್ನು ಸಿಇಟಿ ಯಾಂಕಿಂಗ್‌ಗೆ ಈಗ ಪರಿಗಣಿಸಬೇಕಿದೆ. ದ್ವಿತೀಯ ಪಿಯುಸಿ ಮತ್ತು ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದಿರುವ ಅಂಕಗಳಲ್ಲಿ ತಲಾ ಶೇ.50ರಷ್ಟು ಅಂಕಗಳನ್ನು ಒಟ್ಟುಗೂಡಿಸಿ ಯಾಂಕಿಂಗ್ ನೀಡಲಾಗುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ -1 ಮತ್ತು ಪರೀಕ್ಷೆ -2ರ ಫಲಿತಾಂಶ, ಸಿಬಿಎಸ್ಇ, ಐಸಿಎಸ್ಇ ಫಲಿತಾಂಶ ಕೂಡ ಪ್ರಕಟವಾಗಿದೆ. ಅಭ್ಯರ್ಥಿಗಳು ಪಡೆದ ಅಂಕಗಳ ಕೂಡುವಿಕೆ ಕಾರ್ಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪೂರ್ಣಗೊಳಿಸಿದೆ. ಬಹುತೇಕ ಮೇ 23 ಅಥವಾ 24 ರಂದು ಸಿಇಟಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.