ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರಮೋಷನ್ (ಮುಂಬಡ್ತಿ) ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ಕೇವಲ ಹಿರಿತನ (Seniority) ಮತ್ತು ಸೇವಾನುಭವವಿದ್ದರೆ ಸಾಲದು, ಹುದ್ದೆಗೆ ಅನುಗುಣವಾದ ಕಡ್ಡಾಯ ತರಬೇತಿ ಪಡೆದರೆ ಮಾತ್ರ ಮುಂಬಡ್ತಿ ಸಿಗಲಿದೆ.
ಈ ಕುರಿತು ‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಹೊರಗುತ್ತಿಗೆ ತರಬೇತಿ ಕಡ್ಡಾಯ) ನಿಯಮಗಳು-2026’ ಅಂತಿಮ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ.
ಮುಂಬಡ್ತಿ ನಿಯಮದಲ್ಲಿನ ಪ್ರಮುಖ ಅಂಶಗಳು:
ಗ್ರೂಪ್ ‘ಎ’ ಅಧಿಕಾರಿಗಳು: ಆಡಳಿತಾತ್ಮಕ ಕೌಶಲಗಳನ್ನು ನವೀಕರಿಸಿಕೊಳ್ಳಲು ಉನ್ನತ ಮಟ್ಟದ ತರಬೇತಿ ಪಡೆಯುವುದು ಕಡ್ಡಾಯ.
ಗ್ರೂಪ್ ‘ಬಿ’ ಅಧಿಕಾರಿಗಳು: ಕ್ಷೇತ್ರಕಾರ್ಯ ಮತ್ತು ಕಚೇರಿ ನಿರ್ವಹಣೆಗೆ ಸಂಬಂಧಿಸಿದ ವಿಶೇಷ ತರಬೇತಿ ಪಡೆಯಬೇಕು.
ಗ್ರೂಪ್ ‘ಸಿ’ ಸಿಬ್ಬಂದಿ: ಕಚೇರಿ ಸಹಾಯಕರು ಹಾಗೂ ತಾಂತ್ರಿಕೇತರ ಸಿಬ್ಬಂದಿಗೂ ಈ ಹೊಸ ನಿಯಮ ಅನ್ವಯವಾಗಲಿದೆ.
ವಿನಾಯಿತಿ ಯಾರಿಗೆ?
ಎಲ್ಲಾ ನೌಕರರಿಗೂ ಈ ನಿಯಮ ಅನ್ವಯವಾಗುವುದಿಲ್ಲ. ಈ ಕೆಳಗಿನವರಿಗೆ ತರಬೇತಿಯಿಂದ ವಿನಾಯಿತಿ ನೀಡಲಾಗಿದೆ:
ನಿವೃತ್ತಿಯ ಅಂಚಿನಲ್ಲಿರುವವರು: ಸೇವಾ ನಿವೃತ್ತಿಗೆ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಬಾಕಿ ಇರುವ ನೌಕರರಿಗೆ ತರಬೇತಿ ಕಡ್ಡಾಯವಲ್ಲ.
ಕೆಳಹಂತದ ಸಿಬ್ಬಂದಿ: ಗ್ರೂಪ್ ‘ಸಿ’ ವೃಂದದ ಚಾಲಕರು ಹಾಗೂ ಗ್ರೂಪ್ ‘ಡಿ’ ನೌಕರರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಹಿನ್ನೆಲೆ:
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ಮೊದಲ ವರದಿಯಲ್ಲಿ ಈ ಮಹತ್ವದ ಶಿಫಾರಸನ್ನು ಮಾಡಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿ ಕರಡು ಸಿದ್ಧಪಡಿಸಿತ್ತು. ಈಗ ಅಂತಿಮ ಅಧಿಸೂಚನೆ ಪ್ರಕಟವಾಗುವ ಮೂಲಕ ಅಧಿಕೃತವಾಗಿ ಜಾರಿಗೆ ಬಂದಂತಾಗಿದೆ.








