ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಗಾಬರಿಗೊಳಿಸದೆ, ಅವರೊಂದಿಗೆ ಶಾಂತವಾಗಿ ವರ್ತಿಸಿ, ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಕರೆದುಕೊಂಡು ಬಂದು ಚುಚ್ಚುಮದ್ದು ಕೊಡಿಸುವ ಮೂಲಕ ಜೀವ ಹಾನಿಯಾಗದಂತೆ ಮಾಡಲು ಕೈ ಜೋಡಿಸಿ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಶಿಡಿಗಿನಮೊಳ ಇವರ ಸಂಯುಕ್ತಾಶ್ರಯದಲ್ಲಿ “ಹಾವು ಕಡಿತ ಕುರಿತು ಜಾಗೃತಿ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾವು ಕಚ್ಚಿದಾಗ ಗಾಬರಿಯಾಗುವುದು ಸಾಮಾನ್ಯವಾಗಿದ್ದು, ಇದರಿಂದ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ವಿಷಕಾರಿ ಹಾವು ಕಡಿತದ ಸಂದರ್ಭದಲ್ಲಿ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ 108 ಅಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮೊದಲ ಆದ್ಯತೆ ನೀಡಬೇಕು ಎಂದರು.
ವೈದ್ಯಾಧಿಕಾರಿ ಡಾ.ಸಂತೋಷ್ ಹೆಬ್ಬಾಳ್ ಮಾತನಾಡಿ, ಹಾವು ಕಚ್ಚಿದಾಗ ಕಚ್ಚಿದ ಜಾಗದ ಪಕ್ಕದಲ್ಲಿ ಬಟ್ಟೆಯನ್ನು ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಗಾಯ ಮಾಡುವುದು, ಗಾಯವನ್ನು ಸುಡುವುದು, ನಾಟಿ ಔಷಧಿಗಳನ್ನು ನೀಡುವುದು ಮುಂತಾದವುಗಳನ್ನು ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ಹಾವು ಕಚ್ಚಿದಾಗ ತೆಗೆದುಕೊಳ್ಳಬೇಕಾದ ಕ್ರಮಗಳು:
ಹಾವು ಕಚ್ಚಿದಾಗ ರೋಗಿಯನ್ನು ಕೂರಿಸಿ ಹಾವು ಕಚ್ಚಿರುವ ಭಾಗ ಹೃದಯದ ಕೆಳಗೆ ಬರುವ ಹಾಗೆ ಇರಲಿ ರಕ್ತಪರಿಚಲನೆಗೆ ತಡೆಯಾಗುವಂತಹ ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆದು, ಕಚ್ಚಿದ ಭಾಗವು ಅಲುಗಾಡದಂತೆ ನೋಡಿಕೊಳ್ಳಬೇಕು.
ಮುಖ್ಯವಾಗಿ ಆಸ್ಪತ್ರೆಗೆ ಹೋಗುವಾಗ ವ್ಯಕ್ತಿಯ ರೋಗ ಲಕ್ಷಣಗಳಾದ ತೇಲುಗಣ್ಣು, ಕಣ್ಣು ಮುಚ್ಚುವುದು, ನಾಲಿಗೆ ತೊದಲುವಿಕೆ, ನುಂಗಲು ಕಷ್ಟವಾಗುವುದು, ಉಸಿರಾಟ ತೊಂದರೆ ಮುಂತಾದವುಗಳನ್ನು ಗಮನಿಸಬೇಕು.
ಹಾಗೆಯೇ ಗಾಯದ ಜಾಗದಲ್ಲಿ ತೀವ್ರ ಉರಿ, ನೋವು ಹರಡುವಿಕೆ ಅಥವಾ ಊದುವಿಕೆ ಗಾಯದ ಸುತ್ತ ಬಣ್ಣಹೀನವಾಗುವುದು, ಕೆಳಬೆನ್ನಿನಲ್ಲಿ ನೋವು ಮುಂತಾದ ಲಕ್ಷಣಗಳು ಅಂಗಾAಗಕ್ಕೆ ಹಾನಿ ಮಾಡುವ ವಿಷದ ಅಂಶವಾಗಿರುತ್ತದೆ.
ಈ ಲಕ್ಷಣಗಳನ್ನು ರೋಗಿಯಲ್ಲಿ ಕಂಡುಬAದರೆ ಜೊತೆಗಿರುವ ವ್ಯಕ್ತಿಯು ವೈದ್ಯರಿಗೆ ತಿಳಿಸುವ ಮೂಲಕ ವ್ಯಕ್ತಿಯ ಜೀವ ಕಾಪಾಡಲು ಸಾಧ್ಯವಾಗುವ ಚಿಕಿತ್ಸೆ ಒದಗಿಸಲು ಸಹಾಯಕವಾಗುತ್ತದೆ ಎಂದರು.
ಇದೇ ವೇಳೆಯಲ್ಲಿ ನಾಯಿ ಕಡಿತ, ಬೇಸಿಗೆ ಹಿನ್ನಲೆಯಲ್ಲಿ ಶುದ್ದ ನೀರಿನ ಮಹತ್ವ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಿಡಿಗಿನಮೊಳ ಗ್ರಾಮ ಪಂಚಾಯತ್ ಸದಸ್ಯರಾದ ಗಾದಿಲಿಂಗ ಗೌಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಸಾಂಕ್ರಾಮಿಕ ರೋಗ ತಜ್ಞರಾದ ಡಾ. ವಿಶಾಲಾಕ್ಷಿ, ಎಮ್.ಸಿಂಧು, ನವೀನ್, ಜಿಲ್ಲಾ ಕಾಲರಾ ನಿಯಂತ್ರಣಾ ವಿಭಾಗದ ಶಿವಕುಮಾರ್, ಸವಿತ, ಖಾಸಿಂವಲಿ, ಬಿಹೆಚ್‌ಇಒ ಮಹಮ್ಮದ್ ರಫೀ, ಆರೋಗ್ಯ ಸುರಕ್ಷತಾಧಿಕಾರಿಗಳಾದ ಶಕುಂತಲಮ್ಮ ಸೇರಿದಂತೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.