ಬೆಂಗಳೂರು: ಪ್ರೇಮಿಗಳ ದಿನದಂದು ದೇಶಾದ್ಯಂತ ಓಯೋ (OYO) ಕೊಠಡಿಗಳ ಬುಕಿಂಗ್ ನಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಪ್ರೇಮಿಗಳು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಹೋಟೆಲ್‌ಗಳ ಮೊರೆ ಹೋಗುವುದು ಸಾಮಾನ್ಯ. ಆದರೆ, ಈ ಸಮಯದಲ್ಲಿ ಪೊಲೀಸರು ಅನಿರೀಕ್ಷಿತವಾಗಿ ದಾಳಿ ನಡೆಸಿ, ಪೋಷಕರಿಗೆ ಕರೆ ಮಾಡುವಂತೆ ಒತ್ತಾಯಿಸಿದರೆ ಅಥವಾ ನಿಮ್ಮನ್ನು ಹೆದರಿಸಿದರೆ ಏನು ಮಾಡಬೇಕು? ನಿಮಗೆ ಕಾನೂನುಬದ್ಧವಾಗಿ ಇರುವ ಹಕ್ಕುಗಳೇನು? ಈ ಬಗ್ಗೆ ವಕೀಲರೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಮುಖ ಮಾಹಿತಿ ಇಲ್ಲಿದೆ.
1. ಸಂವಿಧಾನ ನೀಡಿದ ಗೌಪ್ಯತೆಯ ಹಕ್ಕು (Right to Privacy)
ಭಾರತೀಯ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಗೌಪ್ಯತೆಯ ಹಕ್ಕಿದೆ. ನೀವು 18 ವರ್ಷ ದಾಟಿದವರಾಗಿದ್ದರೆ (Major), ಕಾನೂನುಬದ್ಧವಾಗಿ ನೀವು ಯಾರೊಂದಿಗೆ ಬೇಕಾದರೂ ಸಮಯ ಕಳೆಯುವ ಹಕ್ಕನ್ನು ಹೊಂದಿರುತ್ತೀರಿ. ನಿಮ್ಮ ವೈಯಕ್ತಿಕ ಜೀವನದ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಪೊಲೀಸರಿಗೂ ಇರುವುದಿಲ್ಲ.
2. ಪೋಷಕರಿಗೆ ಕರೆ ಮಾಡುವುದು ಕಡ್ಡಾಯವೇ?
ಒಂದು ವೇಳೆ ಪೊಲೀಸರು ಹೋಟೆಲ್‌ಗೆ ಬಂದು ನಿಮ್ಮ ಪೋಷಕರಿಗೆ ಕರೆ ಮಾಡಲು ಒತ್ತಾಯಿಸಿದರೆ, ಅದು ಕೇವಲ ಅವರ ಕೋರಿಕೆ (Request) ಆಗಿರುತ್ತದೆಯೇ ಹೊರತು ಆದೇಶ (Order) ಅಲ್ಲ. ಪೋಷಕರಿಗೆ ಕರೆ ಮಾಡಬೇಕೆ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ನಿಮ್ಮ ವಿವೇಚನೆಗೆ ಬಿಟ್ಟಿದ್ದು.
ಗಮನಿಸಿ: ನೀವು ಮೇಜರ್ ಎಂದು ಸಾಬೀತುಪಡಿಸಲು ನಿಮ್ಮ ಆಧಾರ್ ಕಾರ್ಡ್ ಅಥವಾ ಇತರ ಅಧಿಕೃತ ಗುರುತಿನ ಚೀಟಿಯನ್ನು (ID Proof) ಪೊಲೀಸರಿಗೆ ತೋರಿಸುವುದು ಕಡ್ಡಾಯವಾಗಿದೆ.
3. ಪೊಲೀಸರು ಅಧಿಕಾರ ದುರುಪಯೋಗಪಡಿಸಿಕೊಂಡರೆ ಏನು ಮಾಡಬೇಕು?
ಪೊಲೀಸರು ನಿಮ್ಮನ್ನು ಅನಗತ್ಯವಾಗಿ ಬೆದರಿಸಿದರೆ, ಕಾನೂನುಬಾಹಿರವಾಗಿ ಪೊಲೀಸ್ ಠಾಣೆಗೆ ಕರೆದೊಯ್ದರೆ ಅಥವಾ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ನೀವು ಸುಮ್ಮನಿರಬೇಕಿಲ್ಲ. ಅವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ:
IPC ಸೆಕ್ಷನ್ 166: ಸಾರ್ವಜನಿಕ ಸೇವಕರು ಕಾನೂನನ್ನು ಉಲ್ಲಂಘಿಸಿ ಇನ್ನೊಬ್ಬರಿಗೆ ಹಾನಿ ಮಾಡುವುದು.
IPC ಸೆಕ್ಷನ್ 351, 126, 127: ಕಾನೂನುಬಾಹಿರ ಬಂಧನ ಅಥವಾ ಬೆದರಿಕೆ ಹಾಕುವ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಬಹುದು.
ತಪ್ಪಿತಸ್ಥ ಪೊಲೀಸರಿಗೆ ಈ ಪ್ರಕರಣಗಳ ಅಡಿಯಲ್ಲಿ ಕನಿಷ್ಠ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.








