ಮಂಡ್ಯ : ಶರಣರ ಸಂಘಟನಾ ವೇದಿಕೆ ( ಮದ್ದೂರು ಘಟಕ ) ಹಾಗೂ ಉದ್ಯೋಗ ವಿನಿಮಯ ಕಛೇರಿ ಮಂಡ್ಯ ಅವರ ಸಹಯೋಗದೊಂದಿಗೆ ಅ.13 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶರಣರ ಸಂಘಟನಾ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಂ.ಗಂಗಾಧರ್ ಹೇಳಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆಯ ಸೋಮವಾರದಂದು ನಗರದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮದ್ದೂರು ಕ್ಷೇತ್ರದ ಶಾಸಕರಾದ ಕೆ.ಎಂ.ಉದಯ್ ಅವರು ಉದ್ಘಾಟಿಸಲಿದ್ದಾರೆ ಎಂದರು.
ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಕೆ.ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಟರಾಜ್, ರೈತ ಮುಖಂಡ ಅಣ್ಣೂರು ಮಹೇಂದ್ರ, ನೈದಿಲೆ ಚಂದ್ರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ನೀಡುವುದಕ್ಕಾಗಿ ರಾಜ್ಯದ 30 ಕ್ಕೂ ಹೆಚ್ಚಿನ ಪ್ರತಿಷ್ಟಿತ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ. ಡಿಪ್ಲೋಮಾ, ಐಟಿಐ, ಸ್ನಾತಕೋತ್ತರ, ಎಂಬಿಎ, ಎಂಜಿನಿಯರಿಂಗ್, ಇನ್ನಿತರ ಪದವೀಧರ ಉದ್ಯೋಗಾಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಐಟಿ, ಬಿಟಿ, ಆಟೋಮೊಬೈಲ್, ಫಾರ್ಮಸಿ, ಇನ್ಸೂರೆನ್ಸ್, ಬ್ಯಾಂಕಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಎಲೆಕ್ಟ್ರಿಕಲ್ಸ್, ಫಿಟ್ಟರ್, ನರ್ಸಿಂಗ್ ಸೇರಿದಂತೆ ಹಲವಾರು ಕ್ಷೇತ್ರಗಳ ಉದ್ಯೋಗಾವಕಾಶಗಳಿಗೆ ಈ ಮೇಳದಲ್ಲಿ ಆಯ್ಕೆ ನಡೆಯಲಿದ್ದು, ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ರೆಸ್ಯೂಮ್ ( ವೈಯುಕ್ತಿಕ ವಿವರ ಪತ್ರ )ಗಳನ್ನು ತರತಕ್ಕದ್ದು. ಅಭ್ಯರ್ಥಿಗಳು ಬಯಸಿದ ಕಂಪನಿಗೆ ಸಂದರ್ಶನ ನೀಡಲು ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅದೇ ದಿನ ಕಂಪನಿಗಳು ನೇಮಕಾತಿ ಪತ್ರ ನೀಡಲಿವೆ ಎಂದು ತಿಳಿಸಿದರು.
ಯಾವೆಲ್ಲ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿ.? ಈ ಕೆಳಗಿದೆ ಲೀಸ್ಟ್ ನೋಡಿ
ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ, ಪದವಿಪೂರ್ವ ಕಾಲೇಜಿನ ಮತ್ತು ಪದವಿ ಕಾಲೇಜಿನ ಅಭ್ಯರ್ಥಿಗಳು ಭಾಗವಹಿಸಬಹುದು, ಅಲ್ಲದೆ ಸಂಘ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಚಾರ ನೀಡಿ, ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನಕ್ಕೆ ಬರುವಂತೆ ಮಾಡಬಹುದು ಎಂದು ಗಂಗಾಧರ್ ತಿಳಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ