ಸೊಂತ ಮನೆ ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಆದರೆ ಆಸ್ತಿ ಖರೀದಿಸುವಾಗ ಕೇವಲ ಲೊಕೇಶನ್ ಅಥವಾ ಬೆಲೆಯನ್ನು ಮಾತ್ರ ನೋಡಿದರೆ ಸಾಲದು. ದಾಖಲೆಗಳ ಪರಿಶೀಲನೆಯಲ್ಲಿ ಸ್ವಲ್ಪ ಎಡವಿದರೂ ನಿಮ್ಮ ಜೀವನದ ಅತಿದೊಡ್ಡ ಆರ್ಥಿಕ ನಿರ್ಧಾರವು ಸಂಕಷ್ಟಕ್ಕೆ ಸಿಲುಕಬಹುದು.
ನಗರವಿರಲಿ ಅಥವಾ ಹಳ್ಳಿಯಿರಲಿ, ರಿಜಿಸ್ಟ್ರೇಶನ್ ಮಾಡುವ ಮುನ್ನ ಪ್ರತಿಯೊಬ್ಬ ಖರೀದಿದಾರರು ಕಡ್ಡಾಯವಾಗಿ ಪರಿಶೀಲಿಸಬೇಕಾದ 5 ಪ್ರಮುಖ ದಾಖಲೆಗಳು ಇಲ್ಲಿವೆ:
1 ಅನುಮೋದಿತ ಕಟ್ಟಡ ಯೋಜನೆ (Approved Building Plan)
ನೀವು ಖರೀದಿಸುವ ಮನೆ ಅಥವಾ ಅಪಾರ್ಟ್‌ಮೆಂಟ್‌ನ ನಕ್ಷೆಗೆ ಸ್ಥಳೀಯ ಮುನ್ಸಿಪಲ್ ಅಥವಾ ಟೌನ್ ಪ್ಲಾನಿಂಗ್ ಅಧಿಕಾರಿಗಳಿಂದ ಅನುಮೋದನೆ ಸಿಕ್ಕಿದೆಯೇ ಎಂದು ಮೊದಲು ಪರಿಶೀಲಿಸಿ. ನಿಯಮಾನುಸಾರ ಕಟ್ಟದಿದ್ದರೆ ಭವಿಷ್ಯದಲ್ಲಿ ದಂಡ ತೆರಬೇಕಾಗಬಹುದು ಅಥವಾ ಕಟ್ಟಡ ತೆರವು ಮಾಡುವ ನೋಟಿಸ್ ಬರಬಹುದು. ಅಷ್ಟೇ ಅಲ್ಲ, ಅನುಮೋದಿತ ಪ್ಲಾನ್ ಇಲ್ಲದ ಆಸ್ತಿಗೆ ಬ್ಯಾಂಕ್‌ಗಳು ಸಾಲವನ್ನೂ ನೀಡುವುದಿಲ್ಲ.
2 ಎನ್ಕಂಬರೆನ್ಸ್ ಸರ್ಟಿಫಿಕೇಟ್ (EC – ಋಣಭಾರ ಪ್ರಮಾಣಪತ್ರ)
ನೀವು ಕೊಳ್ಳುತ್ತಿರುವ ಆಸ್ತಿಯ ಮೇಲೆ ಯಾವುದೇ ಸಾಲ, ಅಡಮಾನ ಅಥವಾ ಕಾನೂನುಬದ್ಧ ಬಾಕಿಗಳಿಲ್ಲ ಎಂದು ಈ ಪ್ರಮಾಣಪತ್ರವು ಖಚಿತಪಡಿಸುತ್ತದೆ. ಸ್ಥಳೀಯ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಇದನ್ನು ಪಡೆಯಬಹುದು. ಕಳೆದ ಕೆಲವು ವರ್ಷಗಳ ವಹಿವಾಟಿನ ಇತಿಹಾಸವನ್ನು ಇದು ತೋರಿಸುವುದರಿಂದ, ಆಸ್ತಿಯು ‘ಕ್ಲೀನ್’ ಆಗಿದೆ ಎಂದು ತಿಳಿಯಲು ಇದು ಅತ್ಯಗತ್ಯ.
3 ಟೈಟಲ್ ಡೀಡ್ (ಮಾಲೀಕತ್ವದ ದಾಖಲೆ)
ಆಸ್ತಿಯ ನಿಜವಾದ ಮಾಲೀಕರು ಯಾರು ಮತ್ತು ಅದನ್ನು ಮಾರಾಟ ಮಾಡುವ ಹಕ್ಕು ಅವರಿಗೆ ಇದೆಯೇ ಎಂಬುದನ್ನು ಈ ದಾಖಲೆ ಸಾಬೀತುಪಡಿಸುತ್ತದೆ. ಹಳೆಯ ಮಾಲೀಕತ್ವದ ದಾಖಲೆಗಳನ್ನು (Link Documents) ಕೂಡ ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಕಾನೂನು ತೊಡಕುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಕೀಲರ ಸಲಹೆ ಪಡೆಯುವುದು ಉತ್ತಮ.
4 ಸೇಲ್ ಅಗ್ರಿಮೆಂಟ್ ಮತ್ತು ಸೇಲ್ ಡೀಡ್ (ಮಾರಾಟ ಒಪ್ಪಂದ)
ಖರೀದಿದಾರ ಮತ್ತು ಮಾರಾಟಗಾರರ ನಡುವಿನ ಷರತ್ತುಗಳು, ಪಾವತಿ ವಿಧಾನ ಮತ್ತು ಹಸ್ತಾಂತರದ ದಿನಾಂಕ ಎಲ್ಲವೂ ‘ಸೇಲ್ ಅಗ್ರಿಮೆಂಟ್’ನಲ್ಲಿ ಇರುತ್ತದೆ. ಇನ್ನು ರಿಜಿಸ್ಟ್ರೇಶನ್ ಸಮಯದಲ್ಲಿ ನೀಡಲಾಗುವ ‘ಸೇಲ್ ಡೀಡ್’ ಮೂಲಕ ಮಾಲೀಕತ್ವವು ಕಾನೂನುಬದ್ಧವಾಗಿ ವರ್ಗಾವಣೆಯಾಗುತ್ತದೆ. ಸಹಿ ಮಾಡುವ ಮುನ್ನ ಪ್ರತಿಯೊಂದು ಸಾಲನ್ನೂ ಓದಿ ಅರ್ಥೈಸಿಕೊಳ್ಳುವುದು ಮುಖ್ಯ.
5 ಆಕ್ಯುಪೆನ್ಸಿ ಸರ್ಟಿಫಿಕೇಟ್ (OC – ವಾಸಯೋಗ್ಯ ಪ್ರಮಾಣಪತ್ರ)
ಕಟ್ಟಡವು ಅನುಮೋದಿತ ನಕ್ಷೆಯಂತೆಯೇ ನಿರ್ಮಾಣವಾಗಿದೆ ಮತ್ತು ಅದು ವಾಸಿಸಲು ಯೋಗ್ಯವಾಗಿದೆ ಎಂದು ಅಧಿಕಾರಿಗಳು ಈ ಪ್ರಮಾಣಪತ್ರವನ್ನು ನೀಡುತ್ತಾರೆ. ಇದಿಲ್ಲದಿದ್ದರೆ ವಿದ್ಯುತ್ ಅಥವಾ ನೀರಿನ ಸಂಪರ್ಕ ಪಡೆಯಲು ತೊಂದರೆಯಾಗಬಹುದು. ಅಲ್ಲದೆ ಭವಿಷ್ಯದಲ್ಲಿ ಮನೆಯನ್ನು ಮರುಮಾರಾಟ ಮಾಡುವಾಗಲೂ ಈ ದಾಖಲೆ ಬೇಕೇ ಬೇಕು.
ಗಮನಿಸಿ: ಆಸ್ತಿ ಖರೀದಿ ಎಂಬುದು ಕೇವಲ ಫಾರ್ಮಾಲಿಟಿ ಅಲ್ಲ, ಅದು ನಿಮ್ಮ ಕಷ್ಟಾರ್ಜಿತ ಹಣದ ಭದ್ರತೆ. ಯಾವುದೇ ಆಸ್ತಿ ಕೊಳ್ಳುವ ಮುನ್ನ ಕಾನೂನು ತಜ್ಞರ ನೆರವು ಪಡೆಯಲು ಹಿಂಜರಿಯಬೇಡಿ.








