ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ನೌಕರರು ಇನ್ನು ಮುಂದೆ ಕಟ್ಟುನಿಟ್ಟಾದ ಶಿಸ್ತು ಪಾಲಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಇಲಾಖೆಯ ಆಯುಕ್ತರು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದು, ನಿಯಮ ಮೀರುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಕಚೇರಿ ಸಮಯದಲ್ಲಿ ನೌಕರರು ಸರಿಯಾದ ಸಮಯಕ್ಕೆ ಹಾಜರಾಗದಿರುವುದು, ಗುರುತಿನ ಚೀಟಿ ಧರಿಸದಿರುವುದು ಮತ್ತು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸದಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಹೊಸ ಆದೇಶ ಹೊರಬಿದ್ದಿದೆ.
ನೌಕರರು ಪಾಲಿಸಬೇಕಾದ ಪ್ರಮುಖ ನಿಯಮಗಳು:
ಸಮಯ ಪ್ರಜ್ಞೆ: ಕಚೇರಿಗೆ ಬರುವ ಮತ್ತು ಹೋಗುವ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಲಸದ ಅವಧಿ ಮುಗಿಯುವವರೆಗೆ ನಿಗದಿತ ಸ್ಥಳದಲ್ಲೇ ಇರಬೇಕು.
ಚಲನ-ವಲನ ವಹಿ: ಒಂದು ವೇಳೆ ಕಚೇರಿ ಕೆಲಸದ ನಿಮಿತ್ತ ಹೊರಗೆ ಹೋಗಬೇಕಾದಲ್ಲಿ, ‘ಚಲನ-ವಲನ ವಹಿ’ಯಲ್ಲಿ (Movement Register) ಕಾರಣ ದಾಖಲಿಸಿ ಮೇಲಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ.
ಗುರುತಿನ ಚೀಟಿ ಮತ್ತು ನಾಮಫಲಕ: ಕೆಲಸದ ಅವಧಿಯಲ್ಲಿ ಇಲಾಖೆ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಸಿಬ್ಬಂದಿಯ ಮೇಜಿನ ಮೇಲೆ ಅವರ ಹೆಸರು ಮತ್ತು ಹುದ್ದೆಯನ್ನು ಸೂಚಿಸುವ ನಾಮಫಲಕವಿರಬೇಕು.
ಸಾರ್ವಜನಿಕರೊಂದಿಗೆ ಸೌಜನ್ಯ: ಕಚೇರಿಗೆ ಬರುವ ಹಿರಿಯ ನಾಗರಿಕರು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸಬೇಕು.
ಕಡತಗಳ ವಿಲೇವಾರಿ: ಇ-ಆಫೀಸ್ ಮೂಲಕ ಬರುವ ಕಡತಗಳು ಮತ್ತು ಪತ್ರಗಳನ್ನು ನಿಯಮಾನುಸಾರ ತಕ್ಷಣವೇ ವಿಲೇವಾರಿ ಮಾಡಬೇಕು.
ಶಿಸ್ತು ಕ್ರಮದ ಎಚ್ಚರಿಕೆ:
ಒಂದು ವೇಳೆ ಈ ಮೇಲಿನ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ವಿಫಲರಾದರೆ ಅಥವಾ ನಿರ್ಲಕ್ಷ್ಯ ತೋರಿದರೆ, ಅಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ CCA (Classification, Control, and Appeal) ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.









