ಹಾಸನ: ಅಕ್ಟೋಬರ್.22ರ ಬುಧವಾರ ಸಂಜೆ 7 ಗಂಟೆಯವರೆಗೆ ಮಾತ್ರವೇ ಹಾಸನಾಂಬೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆ ಬಳಿಕ ಅವಕಾಶ ಇರುವುದಿಲ್ಲ ಎಂಬುದಾಗಿ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೀಪಾವಳಿ ವಿಶೇಷ ಪೂಜೆ ನೈವೇದ್ಯಗಳು ಹಾಗೂ ಇತರ ಅಲಂಕಾರಗಳ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಹಾಸನಾಂಬೆ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ ಎಂಬುದಾಗಿ ಹೇಳಿದರು.
ಇಂದು ಕೂಡ ಹಾಸನಾಂಬ ದರ್ಶನ ಸುಗಮವಾಗಿ ನಡೆಯುತ್ತಿದೆ. ಪೂಜಾ ಕಾರ್ಯಕ್ರಮದ ಕಾರಣ ಸೋಮವಾರ ಹಾಗೂ ಮಂಗಳವಾರ ಮಧ್ಯಾಹ್ನ 2ರಿಂದ 3.30 ಗಂಟೆಯ ನಡುವೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ನಾಳೆಯ ಮಂಗಳವಾರದಂದು ದೀಪಾವಳಿ ವಿಶೇಷ ಪೂಜೆಯ ಕಾರಣಕ್ಕೆ ರಾತ್ರಿ 9 ಗಂಟೆಗೆ ಸಾರ್ವಜನಿಕ ದರ್ಶನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಬುಧವಾರ ಬೆಳಗಿನ ಜಾವ 5.30ಕ್ಕೆ ಪೂಜೆ ಮುಗಿಸಿ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಅ.22ರ ಬುಧವಾರದ ಸಂಜೆ 7 ಗಂಟೆಯವರೆಗೆ ಮಾತ್ರವೇ ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುತ್ತದೆ. ಆ ದಿನ ಸಂಜೆ ಸಿದ್ದೇಶ್ವರ ಸ್ವಾಮಿಯ ಜಾತ್ರೆ ಕೂಡ ಇದೆ. ಗುರುವಾರ ಮಧ್ಯಾಹ್ನ ಶಾಸ್ತ್ರದ ಪ್ರಕಾರ ಪೂಜೆ ನೆರವೇರಿಸಿ ಮುಂದಿನ ವರ್ಷದವರೆಗೆ ಹಾಸನಾಂಬೆ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಹೀಗಾಗಿ ಆ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.