ಬೆಂಗಳೂರು: ಗಣಿ ಗುತ್ತಿಗೆ ನವೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇಂತಹ ಅಪ ಪ್ರಚಾರಗಳು ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವು ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಇಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ 8 ಗಣಿ ಕಂಪೆನಿಗಳ ಕುರಿತಾಗಿ ಪ್ರಕಟಗೊಂಡ ಸುದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪತ್ರಿಕಾ ಹೇಳಿಕೆ ವಿವರ ಹೀಗಿದೆ.
2015 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಎಂಎಂಡಿಆರ್-1957 ಕಾಯ್ದೆಯಲ್ಲಿ ನವೀಕರಣವು 20 ವರ್ಷಗಳ ಅವಧಿಗೆ ಅನ್ವಯವಾಗುತ್ತಿತ್ತು. ಅದರ ಪ್ರಕಾರ ಸರ್ಕಾರವು “ಗಣಿ ಗುತ್ತಿಗೆಯ ನವೀಕರಣಕ್ಕೆ ಫಾರೆಸ್ಟ್ ಕ್ಲಿಯರೆನ್ಸ್‌ನ್ನು ಪಡೆದುಕೊಳ್ಳುವ ಸಲುವಾಗಿ ಮಾತ್ರ ಷರತ್ತುಬದ್ಧ ತಾತ್ವಿಕ ಅನುಮೋದನೆ ನೀಡಲಾಗಿದೆ.”
ದಿನಾಂಕ: 12.01.2015 ರಂದು ಕೇಂದ್ರ ಸರ್ಕಾರವು ಎಂಎಂಡಿಆರ್ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಯನ್ನು ತಂದ ಕಾರಣ ವಿವಿಧ ಹಂತದ ಪರಿಶೀಲನೆಗಳನ್ನು ನಡೆಸಿ, ದಿನಾಂಕ: 09.02.2015 ರಂದು ಗಣಿ ಗುತ್ತಿಗೆ ನವೀಕರಣಕ್ಕಾಗಿ ನೀಡಿದ್ದ ಷರತ್ತುಬದ್ಧ 8 ಕಂಪನಿಗಳ ತಾತ್ವಿಕ ಅನುಮತಿ ಪತ್ರಗಳು ಊರ್ಜಿತವಲ್ಲ ಎಂದು ತೀರ್ಮಾನಿಕಸಿ ಅವುಗಳನ್ನು ರದ್ದುಪಡಿಸಿ ತಿದ್ದುಪಡಿ ಕಾಯ್ದೆಯಂತೆ ಕ್ರಮವಹಿಸಲು ಸೂಚಿಸಲಾಯಿತು.
ನಂತರ, ಗಣಿ ಇಲಾಖೆಯು ಸಲ್ಲಿಸಿದ ಡೀಮ್ಡ್ ಅವಧಿ ವಿಸ್ತರಣೆ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ರಾಜ್ಯ ಸರ್ಕಾರವು ಒಂದು ಪ್ರಕರಣವನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಡೀಮ್ಡ್ ಅವಧಿ ವಿಸ್ತರಣೆಗೆ ಪರಿಗಣಿಸದೆ ರದ್ದುಪಡಿಸಲಾಗಿದೆ. ಉಳಿದ 7 ಪ್ರಕರಣಗಳಿಗೆ ಶಾಸನಬದ್ಧವಾದ ಅರಣ್ಯ, ಪರಿಸರ ಮುಂತಾದ ತೀರುವಳಿ ಪತ್ರಗಳನ್ನು ಹಾಜರುಪಡಿಸುವ, ಬೇಬಾಕಿ ಪತ್ರ ಸಲ್ಲಿಸುವ ಹಾಗೂ ಸಿಬಿಐ, ಎಸ್‌ಐಟಿ ಸೇರಿದಂತೆ ವಿವಿಧ ಸಂಸ್ಥೆಗಳ ತನಿಖೆಯ ಅಂತಿಮ ವರದಿಯನ್ನು ಆಧರಿಸಿ ಸರ್ಕಾರದ ಕ್ರಮಕ್ಕೆ ಬದ್ಧರಾಗಲು ಷರತ್ತು ವಿಧಿಸಿ ಡೀಮ್ಡ್ ಅವಧಿ ವಿಸ್ತರಣೆ ಪತ್ರ ನೀಡಲಾಗಿದೆ.
ಆದರೆ, ಈ 7 ಕಂಪನಿಗಳ ಪೈಕಿ 2 ಕಂಪನಿಗಳು ಶಾಸನಬದ್ಧವಾದ ತೀರುವಳಿಗಳನ್ನು ಸಲ್ಲಿಸದ ಕಾರಣ, ಯಾವುದೇ ಗಣಿಗಾರಿಕೆ ಹಕ್ಕುಗಳನ್ನು ನೀಡಿರುವುದಿಲ್ಲ. ಉಳಿದ 5 ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಬಿಜೆಪಿ ಆಡಳಿತದ ಅವಧಿಯಲ್ಲಿ ಅಂದರೆ 2020 ಹಾಗೂ 2021 ರಲ್ಲಿ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ. ಉಳಿದ ಎರಡು ಪ್ರಕರಣಗಳನ್ನು 2016 ಮತ್ತು 2018 ರಲ್ಲಿ ಪೂರಕ ಕರಾರು ಪತ್ರದ ಮುಖಾಂತರ ಷರತ್ತುಬದ್ಧ ಡೀಮ್ಡ್ ವಿಸ್ತರಣೆಯ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ.
ಹಾಗಾಗಿ, ಈ ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ನಷ್ಟವಾಗಲಿಲ್ಲ. ಈ ಅವಧಿಯಲ್ಲಿ ಒಂದು ಹಿಡಿಯಷ್ಟೂ ಅದಿರು ತೆಗೆದಿಲ್ಲ.
ಈ ಕುರಿತಂತೆ ಈ ಹಿಂದೆ ಕೂಡ ವಿರೋಧ ಪಕ್ಷಗಳವರು ಹಾಗೂ ಕೆಲವು ವ್ಯಕ್ತಿಗಳು ಹಲವು ಸಂಸ್ಥೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲವೆಂದು ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ.
ವಿರೋಧ ಪಕ್ಷಗಳವರು ಸದರಿ ವಿಚಾರವನ್ನು ಸದನದಲ್ಲೂ ಪ್ರಶ್ನಿಸಿದ್ದರು. ಈಗಿನ ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಮಂತ್ರಿಯಾಗಿರುವ ಕುಮಾರಸ್ವಾಮಿಯವರು ದಿನಾಂಕ: 14.01.2018 ರಂದು ಪತ್ರಿಕಾ ಗೋಷ್ಠಿಯನ್ನೂ ಮಾಡಿದರು.
ಆದರೆ, ಈ ಯಾವುದೇ ಪ್ರಕರಣಗಳಲ್ಲಿ ಹುರುಳೆ ಇರಲಿಲ್ಲ. ಏಕೆಂದರೆ, ಈ ಎಲ್ಲಾ 8 ಪ್ರಕರಣಗಳನ್ನು ಹೊಸ ಸುಗ್ರೀವಾಜ್ಞೆಯ ನಿಯಮಾವಳಿಗಳಿಗೆ ಅನುಗುಣವಾಗಿ ಕ್ರಮವಹಿಸಲಾಗಿದೆ. ಅವಧಿ ಮುಗಿದ ಗಣಿ ಗುತ್ತಿಗೆಗಳನ್ನು ನಂತರ ನಿಯಮಾನುಸಾರ ಹರಾಜಿಗೆ ಒಳಪಡಿಸಿ ವಿಲೇ ಮಾಡಲಾಗಿದೆ.
ಸುಮಾರು 10 ವರ್ಷಗಳ ನಂತರ ಈ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ಜಗಿಯಲು ಪ್ರಾರಂಭಿಸಿದ್ದಾರೆ.
ಹುರುಳಿಲ್ಲದ ವಿಷಯಕ್ಕೆ ವಿಷ ತುಂಬಿ ನಾಡಿನ ಜನರ ಮೆದುಳನ್ನು ಕಲುಷಿತಗೊಳಿಸಲು ಹೊರಟಿರುವ ದುಷ್ಟ ರಾಜಕೀಯ ಪಿತೂರಿಗಳನ್ನು ನಾಡಿನ ಪ್ರಜ್ಞಾವಂತ ಜನ ನಂಬಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
ಗೃಹ ಲಕ್ಷ್ಮೀ ಹಣದಿಂದ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ನೆರವು
ALERT : ತಲೆಯ ಬಳಿ `ಮೊಬೈಲ್’ ಇಟ್ಟುಕೊಂಡು ಮಲಗುವವರೇ ತಪ್ಪದೇ ಇದನ್ನೊಮ್ಮೆ ಓದಿ.!