ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ತ್ಯಾಗರ್ತಿ ವ್ಯಾಪ್ತಿಯ ಮಳ್ಳಕೊಪ್ಪ ಗ್ರಾಮದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಕಾಮಗಾರಿಯ ಸರ್ವೇ ಕಾರ್ಯ ನಡೆಸುತ್ತಿದ್ದ ತಂಡದ ಮೇಲೆ ಗ್ರಾಮದ ಗುಂಪೊಂದು ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಶನಿವಾರ ಮಧ್ಯಾಹ್ನ ಸುಮಾರು 1:30ರ ಸಮಯದಲ್ಲಿ ಮಳ್ಳಕೊಪ್ಪ ಗ್ರಾಮದ ಸರ್ವೇ ನಂಬರ್ 71/3ರಲ್ಲಿ ಶಿವಕುಮಾರ್ ಎಂಬುವವರ ಜಾಗದಲ್ಲಿ ಸರ್ವೇಯರ್ ಮಲ್ಲನಗೌಡ ಮತ್ತು ಅವರ ತಂಡವು ಹೈಟೆನ್ಷನ್ ವೈಯರ್ ಅಳವಡಿಕೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಮಳ್ಳಕೊಪ್ಪ ಗ್ರಾಮದ ನಿವಾಸಿಗಳಾದ ಸಂಜು, ಸಂತೋಷ್, ರಾಘವೇಂದ್ರ, ಸಚಿನ್, ಸತೀಶ್, ಸುದೀಪ್ ಹಾಗೂ ಪರಮೇಶ್ ಎಂಬುವವರು, “ನಿಮಗೆ ಇಲ್ಲಿ ಕೆಲಸ ಮಾಡಲು ಅನುಮತಿ ನೀಡಿದವರು ಯಾರು?” ಎಂದು ಪ್ರಶ್ನಿಸಿ ಗಲಾಟೆ ಆರಂಭಿಸಿದ್ದಾರೆ.
ಮಾರಕಾಸ್ತ್ರಗಳಿಂದ ದಾಳಿ:
ಆರೋಪಿಗಳು ಸರ್ವೇ ತಂಡದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮ ಕೈಯಲ್ಲಿದ್ದ ದೊಣ್ಣೆ ಹಾಗೂ ಕಲ್ಲುಗಳಿಂದ ಸರ್ವೇಯರ್ ಮಲ್ಲನಗೌಡ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಹಲ್ಲೆಯನ್ನು ತಡೆಯಲು ಹೋದ ದಾವಣಗೆರೆ ಜಿಲ್ಲೆಯ ಬಸವಾಪುರ ಗ್ರಾಮದ ಪರಶುರಾಮ (40) ಎಂಬುವವರ ಮೇಲೆ ಆರೋಪಿಗಳು ಮುಗಿಬಿದ್ದಿದ್ದಾರೆ.
ಕೊಲೆ ಯತ್ನ:
ದೂರಿನಲ್ಲಿ ತಿಳಿಸಿರುವಂತೆ, ಪರಶುರಾಮ ಅವರನ್ನು ಬೆನ್ನಟ್ಟಿಕೊಂಡು ಹೋದ ಆರೋಪಿಗಳು, ಕುಮಾರಗೌಡ ಎಂಬುವವರ ಮನೆಯ ಬಳಿ ಅವರನ್ನು ಕೆಳಗೆ ಬೀಳಿಸಿ, ತಲೆ ಹಾಗೂ ಎದೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕುಮಾರಗೌಡ ಅವರು ಸ್ಥಳಕ್ಕೆ ಬಂದಿದ್ದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸ್ ತನಿಖೆ:
ಘಟನೆಯ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂಜು ಮತ್ತು ತಂಡದ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಿ.ಎಸ್.ಐ ಪ್ರವೀಣ್ ಅವರ ನೇತೃತ್ವದ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
BREAKING: ಛತ್ತೀಸ್ ಗಢದಲ್ಲಿ ಘೋರ ದುರಂತ: ರೋಪ್‌ವೇ ಕೇಬಲ್ ತುಂಡಾಗಿ ಓರ್ವ ಮಹಿಳೆ ಸಾವು, 17 ಮಂದಿಗೆ ಗಾಯ
ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!








