ಪೋರ್ಟ್-ಆ-ಪ್ರಿನ್ಸ್: ಕೆರಿಬಿಯನ್ ರಾಷ್ಟ್ರವಾದ ಹೈಟಿಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಸ್ಮಾರಕವಾದ ಸೈಟಡೆಲ್ ಲಾಫೆರಿಯರ್ (Laferriere Citadel) ಕೋಟೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ತುಳಿತದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ. ವಾರ್ಷಿಕ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಬಂದಿದ್ದ ಸಾವಿರಾರು ಜನರು ಈ ದುರಂತಕ್ಕೆ ಬಲಿಯಾಗಿದ್ದಾರೆ.
ಉತ್ತರ ಹೈಟಿಯಲ್ಲಿರುವ ಯುನೆಸ್ಕೋ (UNESCO) ಮಾನ್ಯತೆ ಪಡೆದ ಈ ಕೋಟೆಯಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೋಟೆಯ ಪ್ರವೇಶ ದ್ವಾರದ ಬಳಿ ಉಂಟಾದ ಜನದಟ್ಟಣೆ ಮತ್ತು ಅದೇ ಸಮಯದಲ್ಲಿ ಸುರಿದ ಮಳೆಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಯುವಜನತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಏರಿಕೆ ಭೀತಿ: ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಾಗರಿಕ ಸಂರಕ್ಷಣಾ ವಿಭಾಗದ ಅಧಿಕಾರಿ ಜೀನ್ ಹೆನ್ರಿ ಪೆಟಿಟ್ ತಿಳಿಸಿದ್ದಾರೆ.
ಹೈಟಿ ಪ್ರಧಾನಿ ಅಲಿಕ್ಸ್ ಡಿಡಿಯರ್ ಫಿಲ್ಸ್-ಐಮೆ ಅವರು ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. “ಇದೊಂದು ದೊಡ್ಡ ದುರಂತ, ದೇಶವು ಶೋಕದಲ್ಲಿ ಮುಳುಗಿದೆ” ಎಂದು ಅವರು ಹೇಳಿದ್ದಾರೆ.








