ಬೆಂಗಳೂರು: ವಿಧಾನ ಪರಿಷತ್ತಿನ ಮಾಜಿ ಸದಸ್ಯರುಗಳಾದ ಪಾಟೀಲ ಸುನಂದಾ ನಿಂಗನಗೌಡ, ಟಿ.ಕೆ. ಚಿನ್ನಸ್ವಾಮಿ, ಇಕ್ಬಾಲ್ ಅಹಮದ್ ಸರಡಗಿ, ಎಂ.ಬಿ. ಭಾನುಪ್ರಕಾಶ್, ಮಾಜಿ ಸಚಿವರುಗಳಾಗಿದ್ದ ನಾಗಮ್ಮ ಕೇಶವಮೂರ್ತಿ, ವಿ. ಶ್ರೀನಿವಾಸ ಪ್ರಸಾದ್, ಎಂ.ಪಿ. ಕೇಶವಮೂರ್ತಿ, ಪಾಡ್ಡನ ಕಲಾವಿದೆ ಗಿಡಿಗೆರೆ ರಾಮಕ್ಕ, ಚಲನಚಿತ್ರರಂಗದ ನಟ ದ್ವಾರಕೀಶ್, ಯಕ್ಷಗಾನದ ಖ್ಯಾತ ಭಾಗವತ ಸುಬ್ರಮಣ್ಯ ಧಾರೇಶ್ವರ, ಯಕ್ಷಗಾನ ಕಲಾವಿದ ಪೇತ್ರಿ ಮಾಧವ ನಾಯಕ್, ಖ್ಯಾತ ಸರೋದ್ ವಾದಕ ರಾಜೀವ್ ತಾರನಾಥ್, ಹಿರಿಯ ರಂಗಕರ್ಮಿ ಡಾ: ನಟೇಶ್ ರತ್ನ, ಕನ್ನಡದ ವಿದ್ವಾಂಸರಾದ ಕಮಲಾ ಹಂಪನಾ ಹಾಗೂ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರುಗಳು ನಿಧನಕ್ಕೆ ಉಭಯ ಸದನಗಳಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು.
ಶ್ರೀಮತಿ ಪಾಟೀಲ ಸುನಂದಾ ನಿಂಗನಗೌಡ :
ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಶ್ರೀಮತಿ ಪಾಟೀಲ ಸುನಂದಾ ನಿಂಗನಗೌಡ ಅವರು ದಿನಾಂಕ:14.04.2024ರಂದು ನಿಧನ ಹೊಂದಿರುತ್ತಾರೆ. ಶ್ರೀಮತಿಯವರು 1953ರ ನವೆಂಬರ್ 2ರಂದು ಅಥಣಿ ತಾಲ್ಲೂಕಿನಲ್ಲಿ ಜನಿಸಿದ್ದು, 1988-1994ರ ಅವಧಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ ಸೇವೆಯನ್ನು ಸಲ್ಲಿಸಿದ್ದರು. ಶ್ರೀಯುತರು ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರಾಗಿ ಅಪಾರವಾದ ಸೇವೆಯನ್ನು ಸಲ್ಲಿಸಿರುತ್ತಾರೆ.
ಟಿ.ಕೆ. ಚಿನ್ನಸ್ವಾಮಿ
ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಟಿ.ಕೆ. ಚಿನ್ನಸ್ವಾಮಿ ಅವರು ದಿನಾಂಕ:10.05.2024ರಂದು ನಿಧನ ಹೊಂದಿರುತ್ತಾರೆ. ಕೊಡಗು ಜಿಲ್ಲೆಯ ತೊರೆನೂರ್‍ನಲ್ಲಿ ಜನಿಸಿದ್ದ ಶ್ರೀಯುತರು ಬಿ.ಎ. ಬಿ.ಎಡ್ ಪದವೀಧರರಾಗಿದ್ದು, ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. 1988-94ರವರೆಗಿನ ಅವಧಿಗೆ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ತಿನ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಸರಕಾರಿ ನೌಕರರ ಸಂಘದ ನಿರ್ದೇಶಕರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಯುತರು ಶಿಕ್ಷಕರ ಪರವಾಗಿ ಹಲವಾರು ಆಂದೋಲನಗಳಲ್ಲಿ ಭಾಗವಹಿಸಿದ್ದರು.
ಇಕ್ಬಾಲ್ ಅಹಮದ್ ಸರಡಗಿ
ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಇಕ್ಬಾಲ್ ಅಹ್ಮದ್ ಸರಡಗಿ ಅವರು ದಿನಾಂಕ:22.05.2024ರಂದು ನಿಧನ ಹೊಂದಿರುತ್ತಾರೆ. 1944ರ ಜೂನ್ 5ರಂದು ಕಲಬುರಗಿಯಲ್ಲಿ ಜನಿಸಿದ್ದ ಶ್ರೀಯುತರು ಬಿ.ಎ. ಎಲ್.ಎಲ್.ಬಿ.. ಪದವೀಧರರಾಗಿದ್ದು, ವೃತ್ತಿಯಲ್ಲಿ ವಕೀಲರು, ಕೃಷಿಕರು ಮತ್ತು ಶಿಕ್ಷಣ ತಜ್ಞರಾಗಿದ್ದರು. 13 ಮತ್ತು 14ನೇ ಲೋಕಸಭೆಯ ಸದಸ್ಯರಾಗಿ, 2014 ರಿಂದ 2020ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಬಿ.ಎಡ್. ಡಿ.ಎಡ್ ವೃತ್ತಿಪರ ಕೋರ್ಸ್‍ಗಳನ್ನು ಆರಂಭಿಸಿ. ಅಲ್-ಬದರ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಅಲ್-ಬದರ್ ಗ್ರಾಮೀಣ ದಂತ ಮಹಾವಿದ್ಯಾಲಯವನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದರು. ಸಮಾಜದಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಎಂ.ಬಿ. ಭಾನುಪ್ರಕಾಶ್
ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಎಂ.ಬಿ. ಭಾನುಪ್ರಕಾಶ್ ಅವರು ದಿನಾಂಕ:17.06.2024ರಂದು ನಿಧನ ಹೊಂದಿರುತ್ತಾರೆ. 1955ರ ನವೆಂಬರ್ 15ರಂದು ಹಾಸನ ಜಿಲ್ಲೆಯ ಮೊಸಳೆ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ಬಿ.ಕಾಂ ಪದವಿ ಹೊಂದಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು. 2012 ರಿಂದ 2018ರವರೆಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅನುಯಾಯಿಯಾಗಿದ್ದರು. ಗ್ರಾಮ ಮತ್ತು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ರಾಮಜನ್ಮಭೂಮಿ ಹೋರಾಟ, ಹುಬ್ಬಳ್ಳಿ ಈದ್ಘಾ ಮೈದಾನ ಹೋರಾಟಗಳಲ್ಲಿ ಭಾಗವಹಿಸಿದ್ದರು.
ನಾಗಮ್ಮ ಕೇಶವಮೂರ್ತಿ
ಮಾಜಿಜಿ ಸಚಿವೆ ಹಾಗೂ ವಿಧಾನ ಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರು ದಿನಾಂಕ:16.03.2024ರಂದು ನಿಧನ ಹೊಂದಿರುತ್ತಾರೆ. ದಾವಣಗೆರೆ ವಿಧಾನ ಸಭಾ ಕ್ಷೇತ್ರದಿಂದ 5ನೇ ವಿಧಾನ ಸಭೆಗೆ ಹಾಗೂ ಮಾಯಕೊಂಡ ವಿಧಾನ ಸಭಾ ಕ್ಷೇತ್ರದಿಂದ 6 ಮತ್ತು 9ನೇ ವಿಧಾನ ಸಭೆಗೆ ಆಯ್ಕೆಯಾಗಿ 3 ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ದಿನಾಂಕ:30.03.1990ರಿಂದ 20.01.1993ರ ಅವಧಿಗೆ ವಿಧಾನ ಸಭೆಯ ಉಪ ಸಭಾಧ್ಯಕ್ಷರಾಗಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1 ರಿಂದ 4ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಿ ಕನ್ನಡ ಕಲಿಕೆಯ ಏಳಿಗೆಗಾಗಿ ಶ್ರಮಿಸಿದ್ದರು. ದಾವಣಗೆರೆ ಜಿಲ್ಲೆಯ ನೂರಾರು ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢ ಶಿಕ್ಷಣ ಆರಂಭಿಸಿ, ಪ್ರಾಥಮಿಕ ಶಾಲಾ ಹಂತದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಿದ ಕೀರ್ತಿ ಇವರದ್ದಾಗಿದೆ. ದಾವಣಗೆರೆಯ “ಮದರ್ ಥೆರೇಸಾ” ಎಂದೇ ಪ್ರಚಲಿತಗೊಂಡಿದ್ದ ಇವರು ಸಮಾಜ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದಾವಣಗೆರೆಯಲ್ಲಿ ವನಿತಾ ಸಮಾಜ ಮತ್ತು ವೃದ್ಧಾಶ್ರಮಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ರಾಜ್ಯ ಹಾಗೂ ವಲಯಮಟ್ಟದ ಹತ್ತಾರು ಬೋಧಕ ಮಂಡಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆ ಹಾಗೂ ರಾಜಕೀಯ ಮತ್ತು ಸಮಾಜ ಸೇವೆಗಾಗಿ ಯಶೋಧಮ್ಮ ದಾಸಪ್ಪ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ ಹಾಗೂ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ವಿ. ಶ್ರೀನಿವಾಸ ಪ್ರಸಾದ್
16ನೇ ಲೋಕಸಭೆಯ ಸಂಸದರಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ಅವರು ದಿನಾಂಕ:29.04.2024ರಂದು ನಿಧನ ಹೊಂದಿರುತ್ತಾರೆ. 1947ರ ಆಗಸ್ಟ್, 06ರಂದು ಮೈಸೂರಿನ ಅಶೋಕಪುರಂನಲ್ಲಿ ಜನಿಸಿದ್ದ ಶ್ರೀಯುತರು ಬಿ.ಎಸ್ಸಿ ಮತ್ತು ಎಂಎ ಪದವೀಧರರಾಗಿದ್ದರು. ಬಾಲ್ಯದಲ್ಲಿಯೇ ರಾಜಕೀಯ ಆಸಕ್ತಿ ಹೊಂದಿದ್ದ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಜನಸಂಘ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. 1974ರಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿ ರಾಜಕೀಯವನ್ನು ಪ್ರವೇಶಿಸಿದರು. ಚಾಮರಾಜನಗರ ಲೋಕಸಭೆ ಕ್ಷೇತ್ರದಿಂದ ಆರು ಬಾರಿ ಲೋಕ ಸಭಾ ಸದಸ್ಯರಾಗಿ ಹಾಗೂ ನಂಜಗೂಡು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರದಲ್ಲಿ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವರಾಗಿ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಡಾ:ಅಂಬೇಡ್ಕರ್‍ರವರ ವಿಚಾರಧಾರೆಗಳನ್ನು ನಿರರ್ಗಳವಾದ ತಮ್ಮ ವಾಕ್‍ಚಾತುರ್ಯದ ಮೂಲಕ ಸದನದಲ್ಲಿ ಮಂಡಿಸುತ್ತಿದ್ದರು. ಉತ್ತಮ ಸಂಸದೀಯ ಪಟುವಾಗಿ, ಎಲ್ಲಾ ಪ್ರಧಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಎಂ.ಪಿ. ಕೇಶವಮೂರ್ತಿ
ಮಾಜಿ ಸಚಿವರು ಹಾಗೂ ವಿಧಾನ ಸಭೆಯ ಮಾಜಿ ಶಾಸಕರಾಗಿದ್ದ ಎಂ.ಪಿ. ಕೇಶವಮೂರ್ತಿ ಅವರು ದಿನಾಂಕ:03.06.2024ರಂದು ನಿಧನ ಹೊಂದಿರುತ್ತಾರೆ. ಆನೇಕಲ್ ವಿಧಾನಸಭಾ ಕ್ಷೇತ್ರದಿಂದ 8ನೇ ಮತ್ತು 9ನೇ ವಿಧಾನ ಸಭೆಗೆ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಶ್ರೀಯುತರು ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಅರಣ್ಯ ಮತ್ತು ಸಣ್ಣ ನೀರಾವರಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆನೇಕಲ್ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಅನುμÁ್ಠನಗೊಳಿಸಿ ಗ್ರಾಮಗಳಿಗೆ ಕುಡಿಯುವ ನೀರು, ಸರ್ಕಾರಿ ಆಸ್ಪತ್ರೆ, ಎ.ಎಸ್.ವಿ ಕಾಲೇಜು, ರಸ್ತೆ ಸೇರಿದಂತೆ ವಿವಿಧ ಮೂಲಸೌಲಭ್ಯ ಕಲ್ಪಿಸಲು ಮತ್ತು ಬಡ ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ನೀಡಲು ಬಹಳಷ್ಟು ಶ್ರಮಿಸಿದ್ದರು.
ಗಿಡಿಗೆರೆ ರಾಮಕ್ಕ
ಕಟೀಲು ದೇವಳದ ಪಾಡ್ಡನ ಕಲಾವಿದೆ ಶ್ರೀಮತಿ ಗಿಡಿಗೆರೆ ರಾಮಕ್ಕ ಅವರು ದಿನಾಂಕ:15.04.2024ರಂದು ನಿಧನ ಹೊಂದಿರುತ್ತಾರೆ. ಮಂಗಳೂರು ತಾಲ್ಲೂಕಿನ ವಾಮಂಜೂರಿನಲ್ಲಿ ಜನಿಸಿದ್ದ ಇವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಾಡ್ಡನಗಳನ್ನು ಕಟ್ಟಿ ನಾಟಿಗದ್ದೆಗಳಲ್ಲಿ ಹಾಡುತ್ತಿದ್ದರು. ಇವರು ಹಾಡಿರುವ ಸಿರಿ ಪಾಡ್ಡನಗಳನ್ನು ಸಂಗ್ರಹಿಸಿ “ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ಡನ” ಎಂಬ ಗ್ರಂಥವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದೆ. ಕಟೀಲು ದೇವಳದ “ಪಾಡ್ಡನ ಕೋಗಿಲೆ” ಎಂದು ಬಿರುದನ್ನು ಸಹ ಪಡೆದಿರುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ, ವೀರರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ಇನ್ನಿತರೆ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ದ್ವಾರಕೀಶ್
ಕನ್ನಡ ಚಲನಚಿತ್ರ ರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ದ್ವಾರಕೀಶ್ ಅವರು ದಿನಾಂಕ:17.04.2024ರಂದು ನಿಧನ ಹೊಂದಿರುತ್ತಾರೆ. 1942ರ ಆಗಸ್ಟ್ 19ರಂದು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಜನಿಸಿದ್ದ ಬಂಗ್ಲೆ ಶ್ಯಾಮರಾವ್ ದ್ವಾರಕಾನಾಥ್ ಇವರು ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಿ.ಪಿ.ಸಿ. ಪಾಲಿಟೆಕ್ನಿಕ್‍ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪೆÇ್ಲಮೋ ಮುಗಿಸಿದ ಶ್ರೀಯುತರು ಅವರ ಸೋದರನ ಜೊತೆ ಭಾರತ್ ಆಟೋ ಸ್ಪೇರ್ ಪಾಟ್ರ್ಸ್ ಸ್ಟೋರ್ಸ್ ಪ್ರಾರಂಭಿಸಿ, 1963ರಲ್ಲಿ ವ್ಯಾಪಾರವನ್ನು ಬಿಟ್ಟು ಸಿನೆಮಾ ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಬಂಗ್ಲೆ ಶಾಮಾರಾವ್ ದ್ವಾರಕಾನಾಥ ಇವರು ದ್ವಾರಕೀಶ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟು, ಬಣ್ಣದ ಬುದುಕಿನಲ್ಲಿ ನೆಲೆ ಕಟ್ಟಿಕೊಳ್ಳುವ ಮಹದಾಸೆಯಿಂದ 1963ರಲ್ಲಿ ಕೃಷ್ಣಮೂರ್ತಿ ನಿರ್ದೇಶನದ “ವೀರ ಸಂಕಲ್ಪ” ಎಂಬ ಕನ್ನಡ ಚಲನಚಿತ್ರದೊಂದಿಗೆ ನಟನೆಯನ್ನು ಪ್ರಾರಂಭಿಸಿ. 1966ರಲ್ಲಿ ಮಮತೆಯ ಬಂಧನದ ಮೂಲಕ ಚಿತ್ರವನ್ನು ನಿರ್ಮಾಣ ಮಾಡಲು ಆರಂಭಿಸಿದರು. 1969ರಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಸಿದ್ದ ನಟರಾದ ಡಾ: ರಾಜ್ ಕುಮಾರ್ ಅವರೊಂದಿಗೆ “ಮೇಯರ್ ಮುತ್ತಣ್ಣ” ಚಿತ್ರದ ನಿರ್ಮಾಪಕರು ಹಾಗೂ ನಟರಾಗಿ ಕೀರ್ತಿ ಪತಾಕೆಯನ್ನು ಹಾರಿಸುತ್ತಾ, ತಮ್ಮ ವೃತ್ತಿಜೀವನದ ಒಂದು ಪ್ರಮುಖ ಘಟ್ಟವನ್ನು ತಲುಪಿ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದರು. ಚಲನಚಿತ್ರ ಉದ್ಯಮಕ್ಕೆ ಹಲವಾರು ಗಮನಾರ್ಹ ಪ್ರತಿಭೆಗಳು ಮತ್ತು ಆಲೋಚನೆಗಳನ್ನು ಪರಿಚಯಿಸಿರುವ ಹೆಗ್ಗಳಿಕೆಗೆ ಇವರು ಪಾತ್ರರಾಗಿರುತ್ತಾರೆ. ಜನಪ್ರಿಯ ಹಿಂದಿ ಗಾಯಕ ಕಿಶೋರ್ ಕುಮಾರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದು ಇವರ ಸಹಯೋಗದ “ಆಡು ಆಟ ಆಡು” ಹಾಡು ನಾಡಿನಾದ್ಯಂತ ವ್ಯಾಪಕ ಜನಪ್ರಿಯತೆಗೊಂಡಿತು.
ಪ್ರಖ್ಯಾತಿ ಹೊಂದಿದ “ಸಿಂಗಪೂರಿನಲ್ಲಿ ರಾಜ ಕುಳ್ಳ” ಹಾಗೂ ತಮಿಳು ಚಲನಚಿತ್ರ ‘ಉಲಗಂ ಸುಟ್ರಂ ವಾಲಿಬನ್’ ಚಿತ್ರಗಳಲ್ಲಿ ಸಿಂಗಾಪುರ್ ಮತ್ತು ಮಲೇμÁ್ಯದ ವ್ಯಾಪಕವಾದ ಶೂಟಿಂಗ್ ಸ್ಥಳಗಳನ್ನು ಪ್ರದರ್ಶಿಸಿ, ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿರುತ್ತಾರೆ. ನೀ ಬರೆದ ಕಾದಂಬರಿ, ಡ್ಯಾನ್ಸ್ ರಾಜ ಡ್ಯಾನ್ಸ್, ರಾಯರು ಬಂದರು ಮಾವನ ಮನೆಗೆ ಮತ್ತು ಕಿಲಾಡಿಗಳು ಚಲನಚಿತ್ರಗಳನ್ನು ನಿರ್ದೇಶಿಸಿ, ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ಗುರುತಿಸಿ ನಟ-ನಟಿಯರು, ನಿರ್ದೇಶಕರು ಮತ್ತು ತಂತ್ರಜ್ಞರಿಗೂ ಅವಕಾಶಗಳನ್ನು ಒದಗಿಸಿದ್ದು, ನಟನೆ. ನಿರ್ದೇಶನ, ನಿರ್ಮಾಣ ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಯಶಸ್ಸು ಕಂಡ ಶ್ರೀಯುತರು “ಗಾಡ್ ಫಾದರ್” ಎಂದು ಗೌರವಿಸಲ್ಪಟ್ಟಿದ್ದರು. ತಮ್ಮ ಜೀವನವನ್ನು ಸಿನಿಮಾರಂಗಕ್ಕೆ ಸಮರ್ಪಿಸಿಕೊಂಡಿದ್ದರು ಎಂಬುದು ಅತಿಶಯೋಕ್ತಿ ಆಗಲಾರದು. 2004ರಲ್ಲಿ ಆಪ್ತಮಿತ್ರ ಚಲನಚಿತ್ರ ಬಹುನಿರೀಕ್ಷಿತ ಯಶಸ್ಸನ್ನು ಕಂಡಿತು. 1986ರಲ್ಲಿ “ಆಫ್ರಿಕಾದಲ್ಲಿ ಶೀಲಾ” ಆಫ್ರಿಕಾದ ಕಾಡುಗಳಲ್ಲಿ ಫ್ಯಾಂಟಿಸಿ ಅಡ್ವಂಚರ್‍ನಂತಹ ಸಾಹಸಗಳ ಚಿತ್ರೀಕರಣ ಮಾಡಿದ ಭಾರತದ ಮೊದಲ ಸಿನಿಮಾ ನಿರ್ದೇಶಕರೆಂದು ಪ್ರಚಲಿತಗೊಂಡಿದ್ದ ಅವರು ಕನ್ನಡ ಭಾμÉ ಅಲ್ಲದೇ ಪರಭಾμÉಯಲ್ಲಿಯೂ ಸಿನಿಮಾ ನಿರ್ದೇಶಿಸಿ, ಕನ್ನಡದ ಕುಳ್ಳ, ಕರ್ನಾಟಕದ ಕುಳ್ಳ ಹಾಗೂ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದರು. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಸುಬ್ರಹ್ಮಣ್ಯ ಧಾರೇಶ್ವರ
ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಗಾನ ಮಾಂತ್ರಿಕ, ಕರಾವಳಿ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಅವರು ದಿನಾಂಕ:25.04.2024ರಂದು ನಿಧನ ಹೊಂದಿರುತ್ತಾರೆ. 1957ರ ಸೆಪ್ಟೆಂಬರ್, 05ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ್ದ ಶ್ರೀಯುತರು ತಮ್ಮ ಜೀವನವನ್ನು ಯಕ್ಷಗಾನಕ್ಕೆ ಮುಡುಪಾಗಿಟ್ಟು, ಯಕ್ಷಗಾನದ ಭಾಗವತಿಕೆಗೆ ವಿಶಿಷ್ಟ ಮೆರುಗು ತಂದ ದೈತ್ಯ ಪ್ರತಿಭೆ. ಇವರು 300ಕ್ಕೂ ಹೆಚ್ಚು ಐತಿಹಾಸಿಕ, ಪೌರಾಣಿಕ ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶನ ಮಾಡಿದ್ದರು. ಅಪ್ರತಿಮ ಕಂಚಿನ ಕಂಠ ಹೊಂದಿದ್ದ ಇವರು, 400ಕ್ಕೂ ಹೆಚ್ಚು ಯಕ್ಷಗಾನದ ಪದ್ಯಗಳ ಆಡಿಯೋ ಕ್ಯಾಸೆಟ್‍ಗಳಿಗೆ ಧ್ವನಿಯಾಗಿದ್ದು, ಸುಮಾರು 47 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಪೆರ್ಡೂರು. ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಭಾಗವತರಾಗಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳದಲ್ಲಿ 28 ವರ್ಷಗಳ ಕಾಲ ಪ್ರಧಾನ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿ ಅಪ್ರತಿಮ ಭಾಗವತರಾಗಿದ್ದ ಶ್ರೀಯುತರಿಗೆ ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ.
ಪೇತ್ರಿ ಮಾಧವ ನಾಯ್ಕ
ಬಡಗು ತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ ಅವರು ದಿನಾಂಕ:05.06.2024ರಂದು ನಿಧನ ಹೊಂದಿರುತ್ತಾರೆ. 1940ರಲ್ಲಿ ಬ್ರಹ್ಮಾವರ ತಾಲ್ಲೂಕಿನ ಪೇತ್ರಿ ಸಮೀಪದ ಹಲುವಳ್ಳಿಯಲ್ಲಿ ಜನಿಸಿದ್ದ ಶ್ರೀಯುತರು 14ನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ ಯಕ್ಷರಂಗಕ್ಕೆ ಪ್ರವೇಶಿಸಿದ್ದು, ಸಾಲಿಗ್ರಾಮ. ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ 30 ವರ್ಷಗಳ ಕಾಲ ವಿವಿಧ ಪಾತ್ರಗಳಲ್ಲಿ ರಂಜಿಸಿ ಅರ್ಥಪೂರ್ಣ ಕಲಾ ಸೇವೆ ಮಾಡಿದ್ದರು. ಡಾ:ಶಿವರಾಮ ಕಾರಂತರ ತಂಡಕ್ಕೆ ಸೇರಿ ದುಬೈ, ಕೆನಡಾ. ಜಪಾನ್, ರಷ್ಯ, ಇಟಲಿ ಸೇರಿದಂತೆ ಹಲವು ಯೂರೋಪ್ ದೇಶಗಳಿಗೆ ತೆರಳಿ ಅಲ್ಲಿನ ಜನರನ್ನು ಬೆರಗುಗೊಳಿಸಿದ್ದ ಇವರಿಗೆ ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.
ರಾಜೀವ್ ತಾರಾನಾಥ
ಪದ್ಮಶ್ರೀ ಪುರಸ್ಕøತ ಶ್ರೇಷ್ಠ ಸಂಗೀತಕಾರರು ಹಾಗೂ ಖ್ಯಾತ ಸರೋದ್ ವಾದಕರಾದ ರಾಜೀವ್ ತಾರಾನಾಥ್ ಅವರು ದಿನಾಂಕ:12.06.2024ರಂದು ನಿಧನ ಹೊಂದಿರುತ್ತಾರೆ. 1932ರ ಅಕ್ಟೋಬರ್ 17ರಂದು ರಾಯಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿರುವ ಪ್ರೇಮಾಯತನ ಆಶ್ರಮದಲ್ಲಿ ಜನಿಸಿದ್ದ ಶ್ರೀಯುತರು ತಮ್ಮ ತಂದೆ ಪಂಡಿತ ತಾರಾನಾಥರವರಿಂದ ಪ್ರಾರಂಭಿಕ ಪಾಠಗಳನ್ನು ಪಡೆದು, ಒಂಭತ್ತು ವರ್ಷ ವಯಸ್ಸಿನಲ್ಲಿಯೇ ಸಂಗೀತ ಕಚೇರಿಯನ್ನು ನಡೆಸಿ, ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು. ಎಂ.ಎ.. ಸಾಹಿತ್ಯದಲ್ಲಿ ಪಿ.ಎಚ್.ಡಿ. ಪದವೀಧರರಾಗಿದ್ದು ಭಾರತ ಮತ್ತು ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವುದಲ್ಲದೆ 1995ರಿಂದ 2005ರ ಅವಧಿಯಲ್ಲಿ ಕ್ಯಾಲಿಫೆÇೀರ್ನಿಯಾ ವಿಶ್ವವಿದ್ಯಾಲಯದ ಕಲಾವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು ಹಾಗೂ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುತ್ತಾರೆ.
1989 ರಿಂದ 1992ರ ಅವಧಿಯಲ್ಲಿ ಫೆÇೀರ್ಡ್ ಪ್ರತಿμÁ್ಠನದ ವಿದ್ವಾಂಸರಾಗಿ ಮೈಹಾರ್-ಅಲ್ಲಾಉದ್ದಿನ್ ಘರಾಣಾದ ಸಂಗೀತ ಪದ್ಧತಿಗಳ ಕುರಿತು ಸಂಶೋಧನೆ ನಡೆಸಿ, ವಿದ್ವತ್ ಪೂರ್ಣ ಗ್ರಂಥವನ್ನು ಪ್ರಕಟಿಸಿದ್ದ ಶ್ರೀಯುತರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹಾಗೂ ಇನ್ನಿತರೆ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.
ಡಾ: ನಟೇಶ್ ರತ್ನ
ಹಿರಿಯ ರಂಗಕರ್ಮಿ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ:ನಟೇಶ್ ರತ್ನ ಅವರು ದಿನಾಂಕ:19.06.2024ರಂದು ನಿಧನ ಹೊಂದಿರುತ್ತಾರೆ. 1934ರ ಡಿಸೆಂಬರ್ 12ರಂದು ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ್ದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಬಿ.ಎಡ್ ಪದವಿ ಪಡೆದು, ಅಮೇರಿಕಾದಲ್ಲಿ ವಾಕ್ ಶ್ರವಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ. ವೃತ್ತಿಯಲ್ಲಿ ವಾಕ್ ಶ್ರವಣ ಚಿಕಿತ್ಸಾ ತಜ್ಞರಾಗಿದ್ದರು. ಶ್ರೀಯುತರು ಕೆಲವು ಚಲನಚಿತ್ರಗಳಲ್ಲೂ ಅಭಿನಯಿಸಿದ್ದು, “ಋಷ್ಯಶೃಂಗ” ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಉತ್ತಮ ಪೆÇೀಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದರು.
ಹವ್ಯಾಸಿ ರಂಗಭೂಮಿಯ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎಲ್ಲಿಗೆ, ಬೊಂತೆ, ಗೋಡೆ ಬೇಕೆ ಗೋಡೆ ಮುಂತಾದ ನಾಟಕಗಳನ್ನು ಹಾಗೂ ರೇಡಿಯೋ ನಾಟಕಗಳನ್ನು ರಚಿಸಿದ್ದರು. ಶ್ರೀಯುತರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಎಂ.ಎನ್.ರಾಯ್ ಪ್ರಶಸ್ತಿ ಹಾಗೂ ಇನ್ನಿತರೆ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕಮಲಾ ಹಂಪನಾ
ಕನ್ನಡದ ಲೇಖಕರು, ವಿದ್ವಾಂಸರು ಹಾಗೂ ಪ್ರಾಧ್ಯಾಪಕರಾಗಿದ್ದ ಶ್ರೀಮತಿ ಕಮಲಾ ಹಂಪನಾ ಅವರು ದಿನಾಂಕ:22.06.2024ರಂದು ನಿಧನ ಹೊಂದಿರುತ್ತಾರೆ. 1935ರ ಅಕ್ಟೋಬರ್ 28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದ್ದ ಶ್ರೀಯುತರು ಬಿ.ಎ. ಆನರ್ಸ್ ಮತ್ತು ಕನ್ನಡ ಸಾಹಿತ್ಯದಲ್ಲಿ ಪಿಹೆಚ್‍ಡಿ ಪದವಿ ಪಡೆದು, ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿ ಆರಂಭಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು ಸರ್ಕಾರಿ ಸೇವೆಯ ನಿವೃತ್ತಿ ನಂತರ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು, ಮೂಡಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಬೋಧಕರಾಗಿ, ಸಂಶೋಧಕರಾಗಿ, ಸಾಹಿತಿಯಾಗಿ ಕನ್ನಡ ಭಾμÉಗಾಗಿ ಶ್ರಮಿಸಿರುವ ಶ್ರೀಯುತರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಮೂಲ್ಯವಾದ 48 ಕೃತಿಗಳನ್ನು ರಚಿಸಿದ್ದಾರೆ. ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿ. ಆಕಾಶವಾಣಿಯಲ್ಲಿ ಚಿಂತನ, ರೂಪಕ, ನಾಟಕ ಹೀಗೆ ವಿಶಿಷ್ಟವಾದ ಕಾರ್ಯಕ್ರಮಗಳನ್ನು ನೀಡಿ, ಪುಸ್ತಕ ರೂಪದಲ್ಲಿಯೂ ಹೊರತಂದಿದ್ದಾರೆ. ಅಕ್ಷತೆ ಸುರಿದ ಕೈಲೇ ಸೀಮೆ ಎಣ್ಣೆ ಸುರಿವರಯ್ಯ, ಅರಿಶಿನ ಹಚ್ಚಿದ ಕೈಲೇ ಬೆಂಕಿ ಹಚ್ಚಿ ಸುಡುವರಯ್ಯ ಎಂಬ ಸಾಲುಗಳು ಹೆಣ್ಣಿನ ಸ್ಥಿತಿಗತಿಗಳ ಕುರಿತು ಅವರ ಕಾಳಜಿಯನ್ನು ಬಿಂಬಿಸುತ್ತದೆ ಹಾಗೂ ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಸಂಶೋಧನೆಗಳು ಶ್ರೀಯುತರಿಗೆ ಹೆಚ್ಚಿನ ಗೌರವಗಳನ್ನು ತಂದುಕೊಟ್ಟಿವೆ.
ಜೈನಧರ್ಮ, ಹಳೆಗನ್ನಡ ಗ್ರಂಥ ಸಂಪಾದನೆ, ಜೀವನ ಚರಿತ್ರೆ, ಕಥೆ, ಕವನ, ವ್ಯಕ್ತಿ ಚಿತ್ರ ಸೇರಿದಂತೆ ಸಾಹಿತ್ಯ ಕ್ಷೇತ್ರದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಅಪರ್ಣಾ
ಕನ್ನಡದ ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣಾ ಅವರು ದಿನಾಂಕ: 11.07.2024ರಂದು ನಿಧನ ಹೊಂದಿರುತ್ತಾರೆ. 1966ರ ಆಕ್ಟೋಬರ್ 14ರಂದು ಜನಿಸಿದ್ದ ಶ್ರೀಯುತರು 1984ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಮಸಣದ ಹೂವು ಚಲನ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಇವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾ ತಾರೆಯಾಗಿ ವೃತ್ತಿ ಬದುಕು ಆರಂಭಿಸಿದ್ದ ಅಪರ್ಣಾ ಅವರು ತಮ್ಮ ವಿಶಿಷ್ಟ ಶೈಲಿಯ ನಿರೂಪಣೆಯಿಂದಲೇ ನಾಡಿನ ಜನರ ಮನ ಗೆದ್ದಿದ್ದರು. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ನಿರೂಪಕಿಯಾಗಿ ಹಲವು ಕಾರ್ಯಕ್ರಮಗಳಿಗೆ ಧ್ವನಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಇದಲ್ಲದೆ. ಪ್ರಸಿದ್ಧವಾದ ಮೂಡಲ ಮನೆ. ಮುಕ್ತ ಧಾರವಾಹಿಗಳಲ್ಲಿ ನಟಿಸಿ ಮಜಾ ಟಾಕೀಸ್ ಮೂಲಕ ಕಿರುತೆರೆಯಲ್ಲಿಯೂ ಎಲ್ಲರನ್ನು ರಂಜಿಸಿದ್ದ ಇವರು ಹಾಸ್ಯತನದಲ್ಲಿ ದಿಗ್ಗಜರಾಗಿದ್ದರು. ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸೂಚನೆಗೆ ಧ್ವನಿಯಾಗಿದ್ದರಲ್ಲದೆ. ರಾಜ್ಯ ಸರ್ಕಾರದ ಪ್ರಾಯೋಜಿತ ಪ್ರಮುಖವಾದ ಬಹುಪಾಲು ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಸತತವಾಗಿ 8 ಗಂಟೆಗಳ ಕಾಲ ನಿರೂಪಣೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅತ್ಯಂತ ಸೊಗಸಾಗಿ ಅಪ್ಪಟ ಕನ್ನಡದಲ್ಲೇ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದರು.
ಅಚ್ಚಗನ್ನಡದ ಸುರಸ್ವರ ಸೌರಭದ ಜೊತೆಗೆ ನಿರೂಪಣೆಯಲ್ಲಿ ತತ್ವಗಳನ್ನು ರೂಪಿಸಿ, ಸ್ಪಷ್ಟ, ಉಚ್ಚಾರ ದೋಷಗಳಿಲ್ಲದ, ಸಾಮಾನ್ಯ ಪದ ಸಂಯೋಜನೆ ನಿರೂಪಣೆಯಲ್ಲಿ ಯಶಸ್ಸು ಸಾಧಿಸಿದ್ದಲ್ಲದೆ ಅಚ್ಚಗನ್ನಡದ ನಿರೂಪಣೆ ಮೂಲಕ ನಾಡಿನ ಮನೆಮಾತಾಗಿದ್ದರು.
ಗಣ್ಯರ ನಿಧನಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರಿದ್ ಅವರುಗಳು ಮೃತರುಗಳ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುವುದರ ಮೂಲಕ ಸಂತಾಪವನ್ನು ವ್ಯಕ್ತಡಿಸಿದರು. ಎರಡೂ ಸದನಗಳಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2024-25ಸಾಲಿನಲ್ಲಿ ವಿವಿಧ ಯೋಜನೆಗಳಿಸ ಸಾಲ-ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ಬೆಂಗಳೂರು, 15ನೇ ಜುಲೈ(ಕರ್ನಾಟಕ ವಾರ್ತೆ):
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನಲ್ಲಿ ಸ್ವಯಂಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆಆರ್ಯ ವೈಶ್ಯಆಹಾರ /ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ ಮತ್ತು ಅರಿವು ಶೈಕ್ಷಣಿಕ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹಾಗೂ ಈ ಯೋಜನೆಗಳಡಿ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಆನ್‍ಲೈನ್ ವಿಳಾಸ: https://kacdc.karnataka.gov.in ರ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಗಿರುತ್ತದೆ.
ಸಾಮಾನ್ಯ ವರ್ಗದಲ್ಲಿನ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು “ನಮೂನೆ-ಜಿ” ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿದ್ದು, ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. ಅರ್ಜಿದಾರರ ಮೊಬೈಲ್ ಸಂಖ್ಯೆಯು ಆಧಾರ್ ಸಂಖ್ಯೆಗೆ ಜೋಡಣೆಯಾಗಿರಬೇಕು. ಮತ್ತು ಬ್ಯಾಂಕ್‍ಖಾತೆಗೆ ಆಧಾರ್ ಸೀಡಿಂಗ್ ಆಗಿರಬೇಕು. ಅರ್ಹ ಅರ್ಜಿದಾರರುಗಳನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮ ನಿಯಮಿತದ ವೆಬ್‍ಸೈಟ್ www.kacdc.karnataka.gov.in ನಲ್ಲಿ ಅಥವಾ ಕೇಂದ್ರ ಕಛೇರಿಯ ದೂರವಾಣಿ ಸಂಖ್ಯೆ:-9448451111 ಹಾಗೂ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮ ಬೆಂಗಳೂರು ಉತ್ತರ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ:-080-23539601ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.