ಬೆಂಗಳೂರು; ನಗರದಲ್ಲಿ ದಿನೇ ದಿನೇ ಲಾರಿ, ಸರಕು ಸಾಗಾಣಿಕೆ ವಾಹನ, ಬಿಬಿಎಂಪಿಯ ಕಸದ ಲಾರಿಗೆ ಜನರು ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಂತಹ ವಾಹನಗಳ ಚಾಲಕರ ಚಾಲನಾ ಪರವಾನಗಿ(ಡಿಎಲ್) ಅನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಆರ್ ಟಿ ಓಗಳಿಗೆ ಸೂಚಿಸುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಸಿಎಂಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರವನ್ನು ಬರೆದಿರುವಂತ ಅವರು, 07-08-2024 ರಂದು ಬೆಂಗಳೂರಿನ ಡಾಬಸ್ ಪೇಟೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಮತ್ತು ಗರ್ಭದೊಳಗೆ ಇದ್ದ ಮಗು ಮೃತ ಪಟ್ಟಿದ್ದು, ಟಿಪ್ಪರ್ ಲಾರಿಯ ಚಾಲಕ ಪರಾರಿಯಾಗಿರುತ್ತಾನೆ. ಒಂದು ವಾರದ ಹಿಂದೆ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಇಂಜಿನಿಯರ್ ಗಳು ಮೃತ ಪಟ್ಟಿದ್ದು, ಬಿಬಿಎಂಪಿ ಕಸದ ಲಾರಿ ಚಾಲಕ ಪರಾರಿಯಾಗಿರುತ್ತಾನೆ. ಇತ್ತೀಚಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಬಹುತೇಕ ಲಾರಿ ಚಾಲಕರ ಚಾಲನಾ ಪರವಾನಿಗಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಸ ಸಾಗಾಣೆ ಮಾಡುವ ಲಾರಿಗಳು, ವಾಣಿಜ್ಯ ಚಟುವಟಿಕೆಗಳಿಗೆ ಮತ್ತು ಕಟ್ಟಡ ಕಾಮಗಾರಿಗಳ ಸಾಗಾಣೆಗೆ ಬಳಸಿಕೊಳ್ಳುವ ಬಹುತೇಕ ಲಾರಿಗಳ ಚಾಲಕರಿಗೆ, ಕಟ್ಟಡ ಮತ್ತು ಇತರೆ ಕಾಮಗಾರಿಗಳಲ್ಲಿ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್ ಗಳ ಚಾಲಕರಿಗೆ ಚಾಲನಾ ಅನುಮತಿ ಪತ್ರವೇ ಇರುವುದಿಲ್ಲ ಎಂದಿದ್ದಾರೆ.
ಕುಡಿದು ವಾಹನಗಳನ್ನು ಚಾಲನೆ ಮಾಡುವುದು, ಅತೀ ವೇಗದ ಚಾಲನೆ, ರಸ್ತೆ ನಿಯಮಗಳ ಉಲ್ಲಂಘನೆ ಮತ್ತು ಕಡಿಮೆ ವೇತನ ನೀಡಿ ಅಸಮರ್ಥ ಚಾಲಕರನ್ನು ಬಳಸಿಕೊಳ್ಳುವ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ ಪದೇ ರಸ್ತೆ ಅಪಘಾತಗಳು ನಡೆಯುತ್ತಿದ್ದು, ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಆದುದರಿಂದ ತಾವು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಲಾರಿ ಮತ್ತು ಸರಕು ಸಾಗಾಣಿಕೆಯ ಹಾಗೂ ಕಸದ ಲಾರಿಗಳ ಚಾಲಕರ ಚಾಲನಾ ಪತ್ರವನ್ನು (DL) ಕಡ್ಡಾಯವಾಗಿ ನಿರಂತರವಾಗಿ ತಪಾಸಣೆ ಮಾಡಲು ಸೂಚಿಸಬೇಕಾಗಿ ಕೋರುತ್ತೇನೆ. ಲೈಸನ್ಸ್ ಇಲ್ಲದೆ ವಾಹನ ಚಾಲನೆ ಮಾಡುವ ಚಾಲಕರ ಮೇಲೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
‘ಬಿಜೆಪಿ ಹೋರಾಟ’ಕ್ಕೆ ಪರಿಶಿಷ್ಟ ಸಮುದಾಯಗಳ ಮುಖಂಡರ ಬೆಂಬಲ: MLC ಛಲವಾದಿ ನಾರಾಯಣಸ್ವಾಮಿ
RBI ನಿಂದ ಮಹತ್ವದ ತೀರ್ಮಾನ: ಈಗ ನಿಮ್ಮ ಚೆಕ್ ಅನ್ನು ಶೀಘ್ರದಲ್ಲೇ ಬ್ಯಾಂಕಿನಿಂದ ಕ್ಲೀಯರ್…!
ಶುಭ ದಿನ, ಗಳಿಗೆ, ನಕ್ಷೆತ್ರ ನೋಡಿ ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ: ಡಿಸಿಎಂ ಡಿ.ಕೆ ಶಿವಕುಮಾರ್