ದುಬೈ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟಿ20ಐ ಇತಿಹಾಸದಲ್ಲಿ 3500 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ 2022ರಲ್ಲಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್ಮನ್ ಈ ಮೈಲಿಗಲ್ಲನ್ನ ತಲುಪಿದರು.

ಪಂದ್ಯದ ಮೊದಲ ಓವರ್ʼನಲ್ಲಿ ಹರೂನ್ ಅರ್ಷದ್ ವಿರುದ್ಧ ಒಂದು ರನ್ ಗಳಿಸುವ ಮೂಲಕ ರೋಹಿತ್ ಈ ಸಾಧನೆ ಮಾಡಿದರು. ಪಂದ್ಯ ಆರಂಭಕ್ಕೂ ಮುನ್ನ 3499 ರನ್ ಗಳಿಸಿದ್ದ ರೋಹಿತ್ 3500 ರನ್ ಗಳಿಸಿದರು.

ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 3497 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 3,343 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಭಾರತೀಯ ನಾಯಕ ಈಗ ಆಟದ ಚುಟುಕು ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 2008ರಿಂದೀಚೆಗೆ ಏಷ್ಯಾಕಪ್‌ನ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಂಡಿರುವ 34ರ ಹರೆಯದ ಶರ್ಮಾ, ಟೂರ್ನಿಯ ಏಳು ಸರಣಿಗಳಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯಾಕಪ್‌ನಲ್ಲಿ ರೋಹಿತ್ 27 ಇನ್ನಿಂಗ್ಸ್‌ಗಳಲ್ಲಿ 40.68ರ ಸರಾಸರಿಯಲ್ಲಿ 895 ರನ್ ಬಾರಿಸಿದ್ದಾರೆ. ಇನ್ನು ಪಂದ್ಯದ ಬಗ್ಗೆ ಮಾತನಾಡಿದ ಹಾಂಕಾಂಗ್ ನಾಯಕ ನಿಜಾಕತ್ ಖಾನ್ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2022ರ ನಾಲ್ಕನೇ ಪಂದ್ಯ ಇದಾಗಿದೆ.

Share.
Exit mobile version