ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಜನವರಿ.7ರಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸೇವೆಯಲ್ಲಿ ವ್ಯತ್ಯಾಯ ಉಂಟಾಗದಂತೆ ಕ್ರಮ ವಹಿಸಲು ಮಹತ್ವದ ಸೂಚನೆ ನೀಡಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ದಿ.07.01.2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಹೋರಾಟಕ್ಕೆ ಕರೆ ನೀಡಿರುತ್ತಾರೆ.
ಸ್ವಯಂ ಸೇವಾ ಮನೋಭಾವ ಹೊಂದಿರುವ ಹಾಗೂ ನಿರ್ದಿಷ್ಟ ಮಾನದಂಡ ಪೂರೈಸುವ ಮಹಿಳೆಯರನ್ನು ಗ್ರಾಮ ಸಭೆಯಲ್ಲಿ ಸ್ಥಳೀಯರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗಿರುತ್ತದೆ. ಆಶಾ ಕಾರ್ಯಕರ್ತೆಯರು ತಮ್ಮ ದೈನಂದಿನ ಕುಟುಂಬದ ಜವಾಬ್ದಾರಿಯೊಂದಿಗೆ ಇಲಾಖೆಯ ಆರೋಗ್ಯ ಸಿಬ್ಬಂದಿಗಳ ಸಮನ್ವಯದೊಂದಿಗೆ ಸ್ಥಳೀಯ ಸಮುದಾಯಕ್ಕೆ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡಿ ಆರೋಗ್ಯ ಸೇವೆಯನ್ನು ನಿಗದಿತ ಸಮಯದಲ್ಲಿ ಪಡೆಯಲು ನೆರವಾಗುವುದು ಆಶಾ ಕಾರ್ಯಕರ್ತೆಯರ ಪಮುಖ ಜವಾಬ್ದಾರಿಯಾಗಿರುತ್ತದೆ ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರ ಸೇವೆಯು ಸ್ವಯಂ ಸೇವಾ ನೆಲೆಗಟ್ಟಿನಲ್ಲಿದ್ದರೂ ಸಹ ಇವರಿಗೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ವತಿಯಿಂದ ಗೌರವಧನ ಮತ್ತು ಪ್ರೋತ್ಸಾಹಧನಗಳನ್ನು ಮಾಹೆವಾರು ಈ ಕೆಳಕಂಡಂತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
- ರಾಜ್ಯ ಸರ್ಕಾರದ ವತಿಯಿಂದ ಮಾಸಿಕ ಗೌರವಧನ ರೂ.5000/- ಗಳನ್ನು ನೀಡಲಾಗುತ್ತಿದೆ.
- ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಎಂಟು ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳಿಗೆ ಮಾಸಿಕ ಪ್ರೋತ್ಸಾಹಧನ ರೂ.2000/-ಗಳನ್ನು ನೀಡಲಾಗುತ್ತಿದೆ.
- ಆಯುಷ್ಮಾನ್ ಆರೋಗ್ಯ ಮಂದಿರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಮಾಸಿಕ ರೂ.1000/-ಗಳ ಟೀಮ್ ಬೇಸ್ ಇನ್ಸೆಂಟಿವ್.
- 34 ಆರೋಗ್ಯ ಚಟುವಟಿಕೆಗಳ ಕಾರ್ಯಕ್ರಮ ಅನುಷ್ಠಾನದ ಆಧಾರದ ಪ್ರೋತ್ಸಾಹಧನ ನೀಡಲಾಗುತ್ತಿದೆ.
- ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ (PMSBY) ಯಡಿಯಲ್ಲಿ ತಲಾ ಎರಡು ಲಕ್ಷಗಳ ರೂಪಾಯಿಗಳ ವಿಮಾ ಸೌಲಭ್ಯವನ್ನು ನೀಡುವ ಮುಖಾಂತರ ಸಾಮಾಜಿಕ ಸುರಕ್ಷೆಯನ್ನು ನೀಡಲಾಗಿದೆ.ಈ ಯೋಜನೆಗಳ ವಾರ್ಷಿಕ ವಿಮಾ ಮೊತ್ತವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಿಂದ ಭರಿಸಲಾಗುತ್ತಿದೆ.
- ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆಯ ವೈದ್ಯಕೀಯ ವಿಮಾ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.
- ಆಶಾ ಕಾರ್ಯಕರ್ತೆಯರು ಇಲಾಖೆಯ ಇತರ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರೊಂದಿಗೆ ಆರೋಗ್ಯ ಸೇವೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕಾಗಿ ಸಿಯುಜಿ ಸಿಮ್‌ಗಳ ಸೌಲಭ್ಯವನ್ನು ಕಲ್ಪಿಸುವ ಅವಕಾಶವಿರುತ್ತದೆ.
- ಆಶಾ ಕಾರ್ಯಕರ್ತೆಯರು ಆರೋಗ್ಯ ಚಟುವಟಿಕೆಗಳನ್ನು ಸ್ಮಾರ್ಟ್ ಫೋನ್ ಬಳಸಿ ದಾಖಲಿಸಲು ಮಾಸಿಕ ರೂ.280/- ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.
- ಆಶಾ ಕಾರ್ಯಕರ್ತೆಯರಿಗೆ ವಾರ್ಷಿಕ ಎರಡು ಜೊತೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆಯನ್ನು ಆಯೋಜಿಸಿ ಆಶಾ ಕಾರ್ಯಕರ್ತೆಯರ ಸ್ಥಳೀಯ ಕುಂದುಕೊರತೆಗಳಿದ್ದಲ್ಲಿ ಶೀಘ್ರ ನಿವಾರಣೆಗೆ ಅಗತ್ಯ ಕ್ರಮ ವಹಿಸಲಾಗಿದೆ.
- ರಾಜ್ಯ ಮಟ್ಟದಲ್ಲಿ ಆಶಾ ಸಂಘಟನೆಯ ಮುಖಂಡರ ಜೊತೆ ನಿರಂತರವಾಗಿ ಸಭೆಗಳನ್ನು ಸಹ ಸಂಧರ್ಭಕ್ಕೆ ಅನುಸಾರವಾಗಿ ನಡೆಸಿ ನೈಜ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿರುತ್ತದೆ.
ಸಮುದಾಯ ಮಟ್ಟದಲ್ಲಿ ಆರೋಗ್ಯ ಸೇವಾ ಪೂರೈಕೆ ಮತ್ತು ರಾಜ್ಯ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಸಂಬಂಧ ಇಲಾಖೆಯ ವತಿಯಿಂದ ಪ್ರತಿ 5000 ಜನಸಂಖ್ಯೆಗೆ ಒಬ್ಬರಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು (PHCO) ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು (CHO-ವಿದ್ಯಾರ್ಹತೆ-Bsc{Nursing) ಮತ್ತು 10000 ಜನಸಂಖ್ಯೆಗೆ ಒಬ್ಬರಂತೆ ಆರೋಗ್ಯ ನಿರೀಕ್ಷಣಾಧಿಕಾರಿಗಳು(HIO) ಕರ್ತವ್ಯ ನಿರ್ವಹಿಸುತ್ತಿದ್ದು, ಆಶಾ ಕಾರ್ಯಕರ್ತೆಯರು ಸದರಿ ಸಿಬ್ಬಂದಿಗಳಿಗೆ ಆರೋಗ್ಯ ಚಟುವಟಿಕೆಗಳ ಅನುಷ್ಠಾನ ಸಂಬಂಧ ಸಹಕಾರವನ್ನು ಮಾತ್ರ ನೀಡುತ್ತಿರುತ್ತಾರೆ.
ದಿನಾಂಕ: 04.01.2025 ರಂದು ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ರವರ ಅಧ್ಯಕ್ಷತೆಯಲ್ಲಿ AUTUC ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಲಾಗುತ್ತಿರುವ ಮೇಲ್ಕಂಡ ಎಲ್ಲಾ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿ ಆಶಾ ಕಾರ್ಯಕ್ರಮವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಭಾಗವಾಗಿದ್ದು, ಹಾಗೂ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿರುವುದರಿಂದ ನಿಯಾಮಾನುಸಾರ ಮಾರ್ಗಸೂಚಿಯಂತೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನಕ್ಕೆ ಒಳಪಟ್ಟಿದ್ದು AIUTUC ಸಂಘಟನೆಯ ಬೇಡಿಕೆಯಂತೆ ಇಲಾಖೆಯ ವತಿಯಿಂದ ಪ್ರತಿ ಮಾಹೆ ನಿರ್ದಿಷ್ಟ 15,000 ರೂಪಾಯಿಗಳನ್ನು ಪಾವತಿ ಮಾಡಲು ನಿಯಾಮಾನುಸಾರ ಮಾರ್ಗಸೂಚಿಯಂತೆ ಅವಕಾಶವಿರುವುದಿಲ್ಲ ಎಂದು ಮನವರಿಕೆ ಮಾಡಿಕೊಡಲಾಗಿರುತ್ತದೆ.
ಆರೋಗ್ಯ ಇಲಾಖೆಯ ಬಹುತೇಕ ಚಟುವಟಿಕೆಗಳನ್ನು ಕೇಂದ್ರಿಕೃತ ವ್ಯವಸ್ಥೆಯಲ್ಲಿ ಮೇಲ್ವಿಚಾರಣೆ ಮಾಡಲು ಅನುವಾಗುವಂತೆ ಡಿಜಿಟಲೀಕರಣಗೊಳಿಸಲಾಗಿರುತ್ತದೆ ಹಾಗೂ ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಹಿನ್ನೆಲೆಯಲ್ಲಿ, ಎಲ್ಲಾ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಕೇವಲ 2-3 ಚಟುವಟಿಕೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಶಾ ಕಾರ್ಯಕರ್ತೆಯರು ನಿರ್ವಹಿಸಬೇಕಾಗಿರುತ್ತದೆ. ಮೊಬೈಲ್ ಫೋನ್ ಬಳಕೆಗೆ ಪ್ರತ್ಯೇಕವಾಗಿ ಮಾಸಿಕ ರೂ.280/- ಗಳನ್ನು ಪಾವತಿ ಮಾಡಲಾಗುತ್ತದೆ ಎಂಬ ಅಂಶವನ್ನು ತಿಳಿಯಪಡಿಸಿದೆ.
ಉದ್ದೇಶಿತ ಹೋರಾಟವನ್ನು ಹಿಂಪಡೆಯಲು ಮನವಿ ಮಾಡಲಾಗಿದ್ದು, ಆದಾಗ್ಯೂ, ಆಶಾ ಕಾರ್ಯಕರ್ತೆಯರು ಉದ್ದೇಶಿತ ಮುಷ್ಕರದಲ್ಲಿ ಭಾಗವಹಿಸಿದ್ದಲ್ಲಿ ಆರೋಗ್ಯ ಸೇವೆಗಳು ಅಗತ್ಯ ಸೇವೆಯಾಗಿರುವುದರಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳ ಪೂರೈಕೆಯಲ್ಲಿ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಯಾವುದೇ ರೀತಿಯ ತೊಡಕುಗಳಾಗದಂತೆ ನಿಯಮಾನುಸಾರ ಕ್ರಮ ವಹಿಸುವುದು ಅತ್ಯಾವಶ್ಯಕವಾಗಿರುತ್ತದೆ. ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಕೆಳಕಂಡ ಕ್ರಮಗಳನ್ನು ವಹಿಸಲು ತಿಳಿಸಿದೆ.
1. ಜಿಲ್ಲಾಡಳಿತದ ವತಿಯಿಂದ ಈ ಮೇಲೆ ತಿಳಿಸಿದ ಆಶಾ ಕಾರ್ಯಕರ್ತೆಯರಿಗೆ ಒದಗಿಸಿರುವ ಸೌಲಭ್ಯಗಳನ್ನು ಆಶಾ ಕಾರ್ಯಕರ್ತೆಯರಿಗೆ ಮನವರಿಕೆ ಮಾಡಿ, ಕಾನೂನು ಬಾಹಿರ ಹೋರಾಟದಲ್ಲಿ ಭಾಗವಹಿಸದಂತೆ ಮನವೊಲಿಸುವುದು.
2. ದಿನಾಂಕ: 07.01.2025 ರಿಂದ ಪ್ರತಿ ದಿನ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ ಆಶಾ ಕಾರ್ಯಕರ್ತೆಯರ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪಡೆಯುವುದು.
3. ಮುಷ್ಕರದಲ್ಲಿ ಭಾಗವಹಿಸಿ ಕರ್ತವ್ಯಕ್ಕೆ ಗೈರುಹಾಜರಾಗುವ ಆಶಾ ಕಾರ್ಯಕರ್ತೆಯರ ಸೇವೆಗಳನ್ನು ಕ್ಷೇತ್ರ ಮಟ್ಟದ ಸಿಬ್ಬಂದಿಗಳಾದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ನೀಡಲು ಕ್ರಮ ವಹಿಸುವುದು. ಆದ್ಯಾಗೂ ಸಾರ್ವಜನಿಕರಿಗೆ ನಿಗದಿತ ಆರೋಗ್ಯ ಸೇವೆ ಒದಗಿಸಲು ತೊಡಕಾದ ಸ್ಥಳಗಳಲ್ಲಿ ಈಗಾಗಲೇ ಇಲಾಖೆಯಿಂದ ನೀಡಿರುವ ಮಾನದಂಡದಂತೆ ಹೊಸ ಆಶಾ ಕಾರ್ಯಕರ್ತೆಯರ ಆಯ್ಕೆ ಪ್ರಕ್ರಿಯೆಯನ್ನು ಚಾಲನೆಗೊಳಿಸುವುದು.
4. ಆರೋಗ್ಯ ಇಲಾಖೆಯ ವತಿಯಿಂದ ಸಮುದಾಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರ ಸಹಕಾರವನ್ನು ಪಡೆದು ಸಾರ್ವಜನಿಕರಿಗೆ ಆರೋಗ್ಯ ಸೇವೆಯ ಪೂರೈಕೆಯಲ್ಲಿ ಯಾವುದೇ ರೀತಿ ತೊಡಕಾಗದಂತೆ ಕ್ರಮ ವಹಿಸುವುದು.
5. ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ (ಖಾಯಂ/ಗುತ್ತಿಗೆ) ವೈದ್ಯಕೀಯ ತುರ್ತು ಹೊರತುಪಡಿಸಿ ಯಾವುದೇ ತರಹದ ರಜೆಯನ್ನು ನೀಡಬಾರದು.
ಮೇಲ್ಕಂಡ ಅಂಶಗಳಂತೆ ತೆಗೆದುಕೊಂಡ ಕ್ರಮ ಹಾಗೂ ಮಾಹಿತಿಗಳನ್ನು ಪ್ರತಿದಿನ ಆಯುಕ್ತಾಲಯಕ್ಕೆ ಸಲ್ಲಿಸಲು ಕೋರಿದ್ದಾರೆ.
BREAKING: ಕನ್ನಡದ ಖ್ಯಾತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ನಾ ಡಿಸೋಜ’ ವಿಧಿವಶ