ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ ನವರಾತ್ರಿ ಹಬ್ಬಕ್ಕೆ ಜನಸಾಮಾನ್ಯರಿಗೆ ಶುಭ ಸುದ್ದಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಸರುಕು ಹಾಗೂ ಸೇವಾ ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಕೊಟ್ಟ ಮಾತು ಈಡೇರಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತಾಲ್ಲೂಕಿನ ಆನವಟ್ಟಿ ಗ್ರಾಮದ ವಾಸವಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದಂತ ಅವರು, ಸೋರುತ್ತಿರುವ ಆದಾಯವನ್ನು ತಡೆಗಟ್ಟಲು ದೇಶಕ್ಕೆ ಒಂದೇ ತೆರಿಗೆ 2016ರಲ್ಲಿ ಜಾರಿಗೆ ತರಲಾಗಿತ್ತು. ಆಟೋಮೊಬೈಲ್ ಉತ್ಪನ್ನಗಳನ್ನು 375 ವಸ್ತುಗಳಿಗೆ ಅನ್ವಯವಾಗುವಂತೆ ಹೊರೆ ಇಳಿಸಲಾಗಿದೆ. ಇದರಿಂದ 2.50 ಲಕ್ಷ ಕೋಟೆ ಸರ್ಕಾರಕ್ಕೆ ಹೊರೆಯಾಗಿದೆ. ಇದು ನವರಾತ್ರಿ ಹಬ್ಬಕ್ಕೆ ಸಾರ್ವಜನಿಕರಿಗೆ ಉಡುಗೊರೆ ಕೊಡಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಒಟ್ಟು 25 ಕೋಟಿ ಜನರು ಬಡತನದ ಪಟ್ಟಿಯಿಂದ ಮುಕ್ತಗೊಂಡಿದ್ದಾರೆ. ಮಧ್ಯಮವರ್ಗ ಮತ್ತು ಸಾಮಾನ್ಯ ಜನರು ಗುಣಮಟ್ಟದ ಜೀವನ ಅನುಕೂಲವಾಗಿದೆ. ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಕರನ್ನು ಮುಕ್ತಗೊಳಿಸಲು ಮಾದಕ ವಸ್ತುಗಳಿಗೆ ಗರಿಷ್ಠ ಶೇ 48 ತೆರಿಗೆ ಉಳಿಸಲಾಗಿದೆ ಎಂದರು.
ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ತಮ್ಮ ದೇಶದ ಯುವಕರಲ್ಲಿ ಉದ್ಯೋಗ ಕಲ್ಪಿಸುವ ದುರುದ್ದೇಶದಿಂದ ಬೇರೆ ಬೇರೆ ದೇಶದಿಂದ ಉದ್ಯೋಗಕ್ಕಾಗಿ ವಲಸೆ ಬರುವ ಯುವಕರ ವೀಸಾ ವಜಾ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದಲ್ಲಿಯೇ ಯುವಕರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಸ್ವದೇಶಿ ಉತ್ಪನ್ನ ಹಾಗೂ ಉತ್ಪಾದಕತೆಗೆ ಉತ್ತೇಜನ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ರೈಲ್ವೆ ಸಂಪರ್ಕ ಕಲ್ಪಿಸಲು ಶ್ರಮ ವಹಿಸಲಾಗಿದೆ. ಇದರಿಂದ ಪ್ರತಿ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದು ತಿಳಿಸಿದರು.
ಆನವಟ್ಟಿ ವರ್ತಕರ ಸಂಘದ ಅಧ್ಯಕ್ಷ ಎ.ಎಲ್.ಅರವಿಂದ್ ಮಾತನಾಡಿ, ಜಿಎಸ್ ಟಿ ಹೊರೆಯಿಂದ ವರ್ತಕರು ಹಾಗೂ ಜನ ಸಮಾನ್ಯರು ಬಳಲುತ್ತಿದ್ದರು. ಜಿಎಸ್ ಟಿ ತೆರಿಗೆ ಬಂದ ಮೇಲೆ ವ್ಯಾಪಾರದಲ್ಲಿ ಸಣ್ಣಪುಟ್ಟ ತಪ್ಪಾದರೂ ಸಾವಿರಾರು ರೂಪಾಯಿ ವರ್ತಕರಿಗೆ ದಂಡ ವಿಧಿಸಲಾಗುತ್ತಿದೆ. ಈ ಬಗ್ಗೆ ಸಂಸದರು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿಗೊಳಿಸಿದ ಹಿನ್ನೆಲೆಯಲ್ಲಿ ಸಂಸದರು ಸಭೆಯಲ್ಲಿ ಸೇರಿದ ವರ್ತಕರಿಗೆ ಸಿಹಿ ಹಂಚಿದರು.
ಈ ವೇಳೆ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ರಾಜು ತಲ್ಲೂರು, ಪ್ರಕಾಶ್ ಬಾಪಟ್, ಗೋಪಾಲಕೃಷ್ಣ, ಡಾ.ಜ್ಞಾನೇಶ್, ಮಲ್ಲಿಕಾರ್ಜುನ ದ್ವಾರಳ್ಳಿ, ಗೀತಾ ಮಲ್ಲಿಕಾರ್ಜುನ, ಪಾಣಿ ರಾಜಪ್ಪ, ಪ್ರಕಾಶ್ ತಲಕಾಲಕೊಪ್ಪ, ಸುರೇಶ್ ಉದ್ರಿ, ಜಾನಕಪ್ಪ ಯಲಸಿ, ಉಮೇಶ್ ಉಡುಗಣಿ,ಸಂಜಯ್ ಡೊಂಗ್ರೆ,ದಯಾನಂದಗೌಡ ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ
ಮೋದಿ GST ಕಡಿತಗೊಳಿಸಿ ಜನತೆಗೆ ದಸರಾ ಗಿಫ್ಟ್ ನೀಡಿದ್ದಾರೆ: ಸೊರಬ ಬಿಜೆಪಿ ಮುಖಂಡ ಡಾ.ಜ್ಞಾನೇಶ್
ಶಿವಮೊಗ್ಗ: ಹಳೇ ಸೊರಬ ಪ್ರಾಥಮಿಕ ಸಹಕಾರ ಸಂಘಕ್ಕೆ 7.26 ಲಕ್ಷ ನಿವ್ವಳ ಲಾಭ