ಬೆಂಗಳೂರು : ಜಗದ್ವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜುನ ಆನೆಯ ಸ್ಮಾರಕ ನಿರ್ಮಿಸಲು ಭೂಮಿ ಪೂಜೆಯನ್ನೂ ನೆರವೇರಿಸಲಾಗಿದೆ. ಹುತಾತ್ಮ ಅರ್ಜುನ ಆನೆಯ ಪ್ರಥಮ ಪುಣ್ಯ ಸ್ಮರಣೆಯ ದಿನವಾದ ಬುಧವಾರ ಈ ಸ್ಮಾರಕ ಲೋಕಾರ್ಪಣೆ ಮಾಡುವ ಉದ್ದೇಶ ಇತ್ತು. ಆದರೆ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಬೆಳಗಾವಿ ಅಧಿವೇಶನದ ನಂತರ ಸ್ಮಾರಕ ಉದ್ಘಾಟನೆ ನೆರವೇರಿಸಲಾಗುವುದು.
ಇನ್ನು ಹೊಸದಾಗಿ ಅರಣ್ಯ ಒತ್ತುವರಿಗೆ ಅವಕಾಶ ನೀಡದೆ, ಶೂನ್ಯ ಸಹಿಷ್ಣುತೆ ತಳೆಯುವಂತೆ ಮತ್ತು ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಭೌಗೋಳಿಕ ಪ್ರದೇಶದ ಶೇ.33ರಷ್ಟು ಹಸಿರು ಹೊದಿಕೆ ಇರಬೇಕು. ಆದರೆ ರಾಜ್ಯದಲ್ಲಿ ಶೇ.22ರಷ್ಟು ಹಸಿರು ಹೊದಿಕೆ ಇದೆ. ಇರುವ ಅರಣ್ಯವನ್ನೂ ಒತ್ತುವರಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಈಗಾಗಲೇ ಅಕ್ಷಾಂಶ, ರೇಖಾಂಶ ಆಧಾರಿತ ಜಿಯೋ ರೆಫರೆನ್ಸ್ ಮೂಲಕ ಗುರುತಿಸಲಾಗಿರುವ ಅರಣ್ಯ ಗಡಿಯೊಳಗೆ ಯಾವುದೇ ಒತ್ತುವರಿ ಆಗದಂತೆ ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರ (KSRSAC) ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ಅರಣ್ಯ ಬದಲಾವಣೆ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.