ಬೆಂಗಳೂರು : “ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲೇವಡಿ ಮಾಡಿದ್ದಾರೆ.
ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಬಿಜೆಪಿ ಶಾಸಕ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿರುವ ಬಗ್ಗೆ ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.
“ಬಿಜೆಪಿಯವರು ಭ್ರಷ್ಟಾಚಾರಿಗಳಾಗಿರುವುದಿಲ್ಲವಲ್ಲವೇ. ನಿಮಗೆ ಯಾರೋ ತಪ್ಪು ಮಾಹಿತಿ ನೀಡಿರಬೇಕು. ಲೋಕಾಯುಕ್ತದವರು ಏನು ಹೇಳುತ್ತಾರೆ ಕಾದು ನೋಡೋಣ. ಆನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ” ಎಂದು ನಯವಾಗಿ ಹರಿಹಾಯ್ದರು.
ಎಐ ಸಮ್ಮೇಳನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ದೇಶ ವಿರೋಧಿ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವು ಏನೆಂದು ತಿಳಿದು, ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.








