ವಾಷಿಂಗ್ಟನ್: ಸ್ಮಾರ್ಟ್ಫೋನ್ ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶದ ಸುರಕ್ಷತೆಯ ಕುರಿತು ಅಮೆರಿಕದ ಗುಪ್ತಚರ ಸಂಸ್ಥೆ ಎಫ್ಬಿಐ (FBI) ಗಂಭೀರ ಎಚ್ಚರಿಕೆ ನೀಡಿದೆ. ವಿದೇಶಿ ಕಂಪನಿಗಳು, ವಿಶೇಷವಾಗಿ ಚೀನಾ ಮೂಲದ ಮೊಬೈಲ್ ಆ್ಯಪ್ಗಳು ಬಳಕೆದಾರರ ಅನುಮತಿಯಿಲ್ಲದೆಯೇ ಅವರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿ ವಿದೇಶಿ ಸರ್ವರ್ಗಳಲ್ಲಿ ಸಂಗ್ರಹಿಸಿಡುತ್ತಿವೆ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ನೀವು ಆ ಆ್ಯಪ್ ಬಳಸದಿದ್ದರೂ ಅಥವಾ ಅದನ್ನು ಇನ್ಸ್ಟಾಲ್ ಮಾಡದಿದ್ದರೂ ನಿಮ್ಮ ಮಾಹಿತಿ ಸೋರಿಕೆಯಾಗುವ ಅಪಾಯವಿದೆ ಎಂದು ಎಫ್ಬಿಐ ಹೇಳಿರುವುದು ಬಳಕೆದಾರರಲ್ಲಿ ಆತಂಕ ಮೂಡಿಸಿದೆ.
ಎಫ್ಬಿಐ ಯಾವುದೇ ಹೆಸರನ್ನು ಅಧಿಕೃತವಾಗಿ ಉಲ್ಲೇಖಿಸದಿದ್ದರೂ, ಮಾರುಕಟ್ಟೆ ತಜ್ಞರ ಪ್ರಕಾರ ಶೀನ್ (Shein), ಟೆಮು (Temu), ಕ್ಯಾಪ್ಕಟ್ (CapCut) ಮತ್ತು ಲೆಮನ್8 (Lemon8) ನಂತಹ ಪ್ರಸಿದ್ಧ ಚೀನಾ ಮೂಲದ ಆ್ಯಪ್ಗಳು ಈ ಪಟ್ಟಿಯಲ್ಲಿವೆ ಎನ್ನಲಾಗಿದೆ.
ಮಾಹಿತಿ ಕಳ್ಳತನದ ರೀತಿ: ಈ ಆ್ಯಪ್ಗಳು ಕೇವಲ ನೀವು ನೀಡುವ ಮಾಹಿತಿಯನ್ನಷ್ಟೇ ಅಲ್ಲದೆ, ನಿಮ್ಮ ಫೋನ್ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್ (ಸಂಪರ್ಕ ಪಟ್ಟಿ), ಲೊಕೇಶನ್ (ಸ್ಥಳ), ಮೆಸೇಜ್ಗಳು ಮತ್ತು ಸಿಸ್ಟಮ್ ಪ್ರಾಂಪ್ಟ್ಗಳನ್ನು ಕೂಡ ಪ್ರವೇಶಿಸುತ್ತವೆ.
ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು ತಮ್ಮ ಫೋನ್ನಲ್ಲಿ ಇಂತಹ ಆ್ಯಪ್ ಇಟ್ಟುಕೊಂಡಿದ್ದರೆ, ಅವರ ಕಾಂಟ್ಯಾಕ್ಟ್ ಲಿಸ್ಟ್ ಮೂಲಕ ನಿಮ್ಮ ಇಮೇಲ್, ಫೋನ್ ಸಂಖ್ಯೆ ಮತ್ತು ವಿಳಾಸ ಕೂಡ ಚೀನಾ ಸರ್ವರ್ಗಳನ್ನು ತಲುಪಬಹುದು.
ಚೀನಾದ ರಾಷ್ಟ್ರೀಯ ಭದ್ರತಾ ಕಾನೂನಿನ ಪ್ರಕಾರ, ಅಲ್ಲಿನ ಸರ್ಕಾರವು ಯಾವುದೇ ಕಂಪನಿಯಿಂದ ಅಲ್ಲಿನ ಸರ್ವರ್ನಲ್ಲಿರುವ ದತ್ತಾಂಶವನ್ನು ಯಾವಾಗ ಬೇಕಾದರೂ ಪಡೆಯಬಹುದು. ಇದು ಜಾಗತಿಕ ಬಳಕೆದಾರರ ಗೌಪ್ಯತೆಗೆ ದೊಡ್ಡ ಅಪಾಯವಾಗಿದೆ.








