ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್, ಟ್ಯಾಬ್ಲೆಟ್ ಮತ್ತು ಟಿವಿ ಪರದೆಗಳ ಮುಂದೆ ಕಳೆಯುವ ಸಮಯ ಗಣನೀಯವಾಗಿ ಹೆಚ್ಚಾಗಿದೆ. ಇದು ಮಕ್ಕಳ ಕಣ್ಣಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನೇತ್ರ ತಜ್ಞರು ಮಕ್ಕಳ ಕಣ್ಣಿನ ರಕ್ಷಣೆಗಾಗಿ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಹಂಚಿಕೊಂಡಿದ್ದಾರೆ.
ವಯಸ್ಸಿನ ಆಧಾರದ ಮೇಲೆ ಸ್ಕ್ರೀನ್ ಸಮಯದ ಮಿತಿ:
ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ನೇತ್ರ ತಜ್ಞರ ಪ್ರಕಾರ, ಮಕ್ಕಳ ವಯಸ್ಸಿಗೆ ಅನುಗುಣವಾಗಿ ಸ್ಕ್ರೀನ್ ಸಮಯ ಈ ಕೆಳಗಿನಂತಿರಬೇಕು:
ಮಗುವಿನ ವಯಸ್ಸು ಶಿಫಾರಸು ಮಾಡಿದ ಸ್ಕ್ರೀನ್ ಸಮಯ
18 ತಿಂಗಳಿಗಿಂತ ಕಡಿಮೆ ಸ್ಕ್ರೀನ್ ಬೇಡ (ಕುಟುಂಬದವರೊಂದಿಗೆ ವಿಡಿಯೋ ಕಾಲ್ ಹೊರತುಪಡಿಸಿ)
18 – 24 ತಿಂಗಳು ಪೋಷಕರ ಮೇಲ್ವಿಚಾರಣೆಯಲ್ಲಿ ಅತ್ಯಲ್ಪ ಸಮಯ (ಉನ್ನತ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮ ಮಾತ್ರ)
2 ರಿಂದ 5 ವರ್ಷ ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ
6 ವರ್ಷ ಮತ್ತು ಮೇಲ್ಪಟ್ಟವರು ದಿನಕ್ಕೆ ಗರಿಷ್ಠ 2 ಗಂಟೆ (ಮನೋರಂಜನೆಗಾಗಿ), ಓದು ಮತ್ತು ಆಟದೊಂದಿಗೆ ಸಮತೋಲನವಿರಲಿ.
ಕಣ್ಣಿನ ಆರೋಗ್ಯ ಕಾಪಾಡಲು ವೈದ್ಯರ ‘ಗೋಲ್ಡನ್ ರೂಲ್ಸ್’:
ಮಕ್ಕಳು ಡಿಜಿಟಲ್ ಸಾಧನಗಳನ್ನು ಬಳಸುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ವೈದ್ಯರು ಸಲಹೆ ನೀಡಿದ್ದಾರೆ:
20-20-20 ನಿಯಮ: ಪ್ರತಿ 20 ನಿಮಿಷಗಳ ಸ್ಕ್ರೀನ್ ಬಳಕೆಯ ನಂತರ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡುವುದರಿಂದ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ.
ಮೊಣಕೈ ನಿಯಮ (Elbow Rule): ಮೊಬೈಲ್ ಅಥವಾ ಪುಸ್ತಕವನ್ನು ಕಣ್ಣಿನಿಂದ ಕನಿಷ್ಠ ಒಂದು ಮೊಣಕೈ ಉದ್ದದ ದೂರದಲ್ಲಿಟ್ಟುಕೊಳ್ಳಬೇಕು (ಸುಮಾರು 12-15 ಇಂಚು).
ಹೊರಾಂಗಣ ಆಟ: ದಿನಕ್ಕೆ ಕನಿಷ್ಠ 1 ರಿಂದ 2 ಗಂಟೆಗಳ ಕಾಲ ಸೂರ್ಯನ ಬೆಳಕಿನಲ್ಲಿ ಅಥವಾ ಹೊರಾಂಗಣದಲ್ಲಿ ಆಟವಾಡುವುದರಿಂದ ಮಕ್ಕಳಲ್ಲಿ ಸಮೀಪದೃಷ್ಟಿ (Myopia) ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಮಿನುಗುವಿಕೆ (Blinking): ಸ್ಕ್ರೀನ್ ನೋಡುವಾಗ ಕಣ್ಣುಗಳನ್ನು ಪದೇ ಪದೇ ಮಿಟುಕಿಸುವುದನ್ನು ರೂಢಿಸಿಕೊಳ್ಳಬೇಕು. ಇದು ಕಣ್ಣು ಒಣಗದಂತೆ (Dry Eyes) ತಡೆಯುತ್ತದೆ.








