ಆಯುರ್ವೇದ ವೈದ್ಯರು ನಕಲಿ ವೈದ್ಯರೇ? ನಿಜವಾಗಿಯೂ ಅಲ್ಲ, ಇತ್ತೀಚಿನ ಕೆಲವು ದಿನಗಳಿಂದ ಆಯುಷ್ ವೈದ್ಯರು ನಕಲಿ ವೈದ್ಯರು ಎಂಬಂತೆ ಬಿಂಬಿಸಲಾಗುತ್ತಿದೆ, ಇದರಿಂದ ಜನಸಾಮಾನ್ಯರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ.ಆಯುರ್ವೇದ ವೈದ್ಯರಾಗಲು ಅವರ ಕಲಿಕಾ ಹಂತಗಳು ಹಾಗು ಅವರು ಕಲಿಯುವ ವಿಷಯಗಳ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.
10 ನೇ ತರಗತಿ ಮುಗಿಸಿದ ನಂತರ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳು ಯಾವುದೇ ವೈದ್ಯಕೀಯ ಕೋರ್ಸ್ ಮಾಡಲು ಅರ್ಹರಿರುತ್ತಾರೆ.ಇದರಲ್ಲಿ ಆಯುರ್ವೇದ ಶಾಸ್ತ್ರ(ವಿಜ್ಞಾನ) ವು ಒಳಗೊಂಡಿದೆ.
ನಂತರದಲ್ಲಿ ಆ ವಿದ್ಯಾರ್ಥಿಗಳು ಮೆಡಿಕಲ್ ಕೋರ್ಸ್ಗಗೆ ಅಂದರೆ MBBS /Ayush/BDS ಗೆ ಸೇರಲು ಪ್ರವೇಶ ಪರೀಕ್ಷೆಯಾದ ನೀಟ್ (National Eligibility cum Entrance Test) ಪರೀಕ್ಷೆಯಲ್ಲಿ ಕಡ್ಡಾಯವಾಗಿ ಅರ್ಹತಾ ಅಂಕಗಳನ್ನು ಗಳಿಸಬೇಕಾಗುತ್ತದೆ. ನಂತರ ಕೌನ್ಸಿಲಿಂಗ್ ಮುಖೇನ ವಿದ್ಯಾರ್ಥಿಗಳ ರ‍್ಯಾಂಕ್ ಗಳ ಆಧಾರಿಸಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶವನ್ನು ಪಡೆಯುತ್ತಾರೆ.
ಮೇಲಿನ ಹಂತವು ಎಲ್ಲಾ ವೈದ್ಯಕೀಯ ಕೋರ್ಸ್ ಗಳಿಗೆ ಅನ್ವಯಿಸುತ್ತದೆ. ನಂತರದಲ್ಲಿ ಅಭ್ಯರ್ಥಿಯು ಆಯ್ದುಕೊಂಡ ಕೋರ್ಸಗಳಿಗೆ ಅನುಗುಣವಾಗಿ ಅವರ ಪಠ್ಯಕ್ರಮಗಳು ಅಥವಾ ವಿಷಯಗಳ ಭಿನ್ನವಾಗಿರುತ್ತವೆ. ಈಗ ಆಯುರ್ವೇದ ವೈದ್ಯರು ಕಲಿಯುವ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದ ಪದವಿ ಕೋರ್ಸ್ ಒಟ್ಟಾರೆಯಾಗಿ 5.5 ವರ್ಷದಾಗಿರುತ್ತದೆ, 4.5 ವರ್ಷ ಕಲಿಕಾ /ಶೈಕ್ಷಣಿಕ ಹಂತ ಮತ್ತು 1 ವರ್ಷ ಇಂಟರ್ನ್ಶಿಪ್ (training).
ಕಡ್ಡಾಯವಾಗಿ 5.5 ವರ್ಷ ಪೂರ್ಣವಾದ ನಂತರದಲ್ಲಿ ಆಯುರ್ವೇದ ಪದವಿಯನ್ನು ನೀಡಲಾಗುತ್ತದೆ. ಆ 4.5 ವರ್ಷಗಳ ಶೈಕ್ಷಣಿಕ ಹಂತದಲ್ಲಿ ಆಯುರ್ವೇದ ಪದವಿ ಪಡೆಯುವ ವಿದ್ಯಾರ್ಥಿಗಳು ಒಟ್ಟಾರೆಯಾಗಿ 19 ವಿಷಯಗಳನ್ನು ಕಲಿಯುತ್ತಾರೆ. ಅವುಗಳೆಂದರೆ ರಚನಾ ಶಾರೀರ (Anatomy) , ಕ್ರಿಯಾ ಶಾರೀರ(Physiology, Biochemistry), ದ್ರವ್ಯಗುಣ(Pharmacology) ,ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ (Pharmaceutics and clinical Pharmacology) , ಅಗಧತಂತ್ರ(toxicology), ಕೌಮಾರಭೃತ್ಯ(Paediatrics), ರೋಗ ನಿಧಾನ(Pathology), ಸ್ವಸ್ಥವೃತ್ಥ(Preventive and Social Medicine), ಪ್ರಸೂತಿ ತಂತ್ರ ಮತ್ತು ಸ್ರೀರೋಗ (gynecology and Obstetrics) ,ಕಾಯಚಿಕಿತ್ಸಾ(Internal Medicine), ಶಲ್ಯ ತಂತ್ರ(Surgery), ಶಾಲಾಖ್ಯಾ ತಂತ್ರ (Ophthalmology and ENT), ಪಂಚಕರ್ಮ ಚಿಕಿತ್ಸೆ ಹಾಗೂ ಸಂಸ್ಕೃತ ಭಾಷೆ, ಆಯುರ್ವೇದ ಸಂಹಿತೆಗಳಾದ ಚರಕ ಸಂಹಿತೆ, ಅಷ್ಟಾಂಗ ಹೃದಯ ಮುಂತಾದವುಗಳು.
ಈ ವಿಷಯಗಳನ್ನು ಆಯುರ್ವೇದದಲ್ಲಿ ತಿಳಿಸಿರುವಂತೆ ತಿಳಿಯುವುದಲ್ಲದೆೇ, ಆಧುನಿಕ ಶಾಸ್ತ್ರದ ವಿಷಯಗಳ ಬಗ್ಗೆಯೂ ತಿಳಿಸಲಾಗುತ್ತದೆ ಮತ್ತು ಮೃತ ದೇಹ ಛೇದನ (Dissection), Laboratory(Physiology and Pathology), ರೋಗಿ ಪರೀಕ್ಷೆ ಮತ್ತು ರೋಗದ ಪರೀಕ್ಷೆ ಮುಂತಾದ ಪ್ರಾಯೋಗಿಕ ಶಿಕ್ಷಣವನ್ನು ನೀಡಲಾಗುತ್ತದೆ.
ತದನಂತರ ಆಯುರ್ವೇದ ಪದವಿ ಪಡೆದ ವೈದ್ಯರುಗಳು ಆಯಾ ರಾಜ್ಯದ / ದೇಶದ (state Or central) ವೈದ್ಯರ ಮಂಡಳಿಗಳ ನಿಯಮಾನುಸಾರವಾಗಿ ನೋಂದಣಿಯನ್ನು ಪಡೆದು, KPME(Karnataka Private Medical Establishment) ನೋಂದಣಿಯನ್ನು ಪಡೆದು ವೈದ್ಯ ವೃತ್ತಿಯನ್ನು ಪ್ರಾರಂಭಿಸುತ್ತಾರೆ.
ಆಯುರ್ವೇದ ಪದವಿಯನ್ನು ಪಡೆದ ವೈದ್ಯರುಗಳು , ಪ್ರವೇಶ ಪರೀಕ್ಷೆ ಯಾದ ಪಿಜಿ ನೀಟ್ (ALL INDIA AYUSH POST GRADUATE ENTRANCE TEST) ನಲ್ಲಿ ಅರ್ಹತಾ ಅಂಕವನ್ನು ಪಡೆದ ಅಭ್ಯರ್ಥಿ ಅವರವರ ಇಚ್ಛೆಗನುಗುಣವಾಗಿ ಮತ್ತು ರ‍್ಯಾಂಕ್ ಆಧಾರಿಸಿ ವಿವಿಧ ವಿಷಯಗಳಲ್ಲಿ 3 ವರ್ಷ ಅವಧಿಯ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.
ಇಷ್ಟೆಲ್ಲಾ ಸುಮಾರು 9 ವರ್ಷಗಳ ಕಾಲ ವೈದ್ಯಕೀಯ ಶಿಕ್ಷಣ ಪಡೆದ ಆಯುಷ್ ವೈದ್ಯರನ್ನು ನಕಲಿ ಎನ್ನುವುದು ಎಷ್ಟು ಸರಿ?
ಆಯುಷ್ ವೈದ್ಯರ ಸೇವೆ
ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವುದು ಆಯುಷ್ ವೈದ್ಯರುಗಳೇ. ಕೋವಿಡ್ -19 ರ ಸಮಯದಲ್ಲೂ ಕೂಡ ಆಯುಷ್ ವೈದ್ಯರ ಸೇವೆ ಶ್ಲಾಘನೀಯ.
ಆಯುಷ್ ವೈದ್ಯರ ತೊಂದರೆಗಳು
ಸರ್ಕಾರವು ಆಯುಷ್ ಇಲಾಖೆ ಖಾಲಿ ಇರುವ ಹುದ್ದೆ ಗಳನ್ನು ಭರ್ತಿ ಮಾಡದಿರುವುದು.ಗುತ್ತಿಗೆ ಆಧಾರದ ಮೇಲೆ MBBS ಪದವಿ ಹೊಂದಿರುವ ವೈದ್ಯರುಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗೆ BAMS ಪದವಿದರರನ್ನು ಕಡಿಮೆ ಸಂಬಳದೊಂದಿಗೆ ಭರ್ತಿ ಮಾಡಿಕೊಳ್ಳುತ್ತದೆ.
ನೆರೆ ರಾಜ್ಯಗಳಲ್ಲಿ ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆಯನ್ನು ನೀಡಬಹುದೆಂದು ಕಾನೂನುಬದ್ಧವಾಗಿ ಅವಕಾಶ ವನ್ನು ಕಲ್ಪಿಸಲಾಗಿದೆ.ಆದರೆ ನಮ್ಮ ರಾಜ್ಯದಲ್ಲಿ ಈ ತರಹದ ಕಾನೂನು ಇನ್ನು ಜಾರಿಯಲ್ಲಿಲ್ಲ.ಸರ್ಕಾರವು ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ ನಿಯಮಾವಳಿಗಳು, 2016 ಅನ್ನು ತಿದ್ದುಪಡಿ ಮಾಡಿ, ಆಯುರ್ವೇದದಲ್ಲಿ M.S (Master of surgery) ಸ್ನಾತಕ ಪದವಿ ಪಡೆದ ವೈದ್ಯರುಗಳಿಗೆ ಸುಮಾರು 40ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಗಳನ್ನು ಮಾಡಲು ಅವಕಾಶವನ್ನು ನೀಡಿದೆ.
ಆಯುರ್ವೇದ ವೈದ್ಯರುಗಳು ಆಯುರ್ವೇದ ಶಾಸ್ತ್ರ ಶಿಕ್ಷಣವನ್ನು ಪಡೆಯುವುದಲ್ಲದೇ, ಆಧುನಿಕ ಶಾಸ್ತ್ರ (ಅಲೋಪತಿ)ಬಗ್ಗೆಯೂ ಶಿಕ್ಷಣವನ್ನು ಪಡೆದುಕೊಂಡಿರುತ್ತಾರೆ.
ತುರ್ತು ಸಮಯದಲ್ಲಿ ಅಲೋಪತಿ ಚಿಕಿತ್ಸೆಯನ್ನು ನೀಡಿದ ಮಾತ್ರಕ್ಕೆ ಆಯುಷ್ ವೈದ್ಯರನ್ನು ನಕಲಿ ಎಂದು ಬಿಂಬಿಸಿ, ಸಮಾಜಕ್ಕೆ ತಪ್ಪು ಮಾಹಿತಿಯನ್ನು ನೀಡುವುದು ಸರಿಯಾದ ಕ್ರಮವಲ್ಲ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಎಲ್ಲಾ ವೈದ್ಯಕೀಯ ಶಾಸ್ತ್ರಗಳು ಅತ್ಯಗತ್ಯ ಮತ್ತು ಎಲ್ಲ ವೈದ್ಯರ ಧ್ಯೇಯ ರೋಗಿಯ ಗುಣಪಡಿಸುವುದೇ ಮುಖ್ಯ ಉದ್ದೇಶವಾಗಿರುತ್ತದೆ.
ಲೇಖನ: ಡಾ. ಪ್ರವೀಣ್ ಕುಮಾರ್ BAMS, MD(Ayu), ಆಯುರ್ವೇದ ವೈದ್ಯ, ಹಗರಿಬೊಮ್ಮನಹಳ್ಳಿ
ಕರ್ನಾಟಕದಲ್ಲಿ ‘ವೈದ್ಯರ ಸುರಕ್ಷತೆ’ಗೆ ಸರ್ಕಾರದಿಂದ ಈ ಮಹತ್ವ ಕ್ರಮಕ್ಕೆ ನಿರ್ಧಾರ
BIG NEWS: ಇನ್ಮುಂದೆ ಎಲ್ಲಾ ‘ಸರ್ಕಾರಿ ಕಟ್ಟಡ’ಗಳಿಗೆ ‘ಮೈಸೂರು ಪೇಂಟ್ಸ್’ : ಸಚಿವ ಎಂ.ಬಿ ಪಾಟೀಲ್
‘ಸಿದ್ದರಾಮಯ್ಯ’ ಅವರದು ಹೆದರುವ ರಕ್ತವಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್