ನವದೆಹಲಿ:ದೇಶದ ರಾಜಕೀಯ ಇತಿಹಾಸದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಎನ್‌ಡಿಎ (NDA) ಸರ್ಕಾರವು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದೆ. ಮಹಿಳಾ ಮೀಸಲಾತಿ ಕಾಯ್ದೆಯ (ನಾರಿ ಶಕ್ತಿ ವಂದನ್ ಅಧಿನಿಯಮ) ಅಡಿಯಲ್ಲಿ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸಲು ಮತ್ತು ಮೀಸಲಾತಿಯನ್ನು ಶೀಘ್ರವಾಗಿ ಜಾರಿಗೆ ತರಲು ಏಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತಿದೆ.
ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳನ್ನು 816ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಮಂಡಿಸಲಿದೆ. ಅಂದರೆ ಸುಮಾರು 273 ಹೊಸ ಸ್ಥಾನಗಳನ್ನು ಸೃಷ್ಟಿಸಲಾಗುತ್ತಿದ್ದು, ಈ ಎಲ್ಲಾ ಹೆಚ್ಚುವರಿ ಸ್ಥಾನಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲಾಗುವುದು.
ಶೇ. 33ರಷ್ಟು ಮೀಸಲಾತಿ ಖಚಿತ: ಒಟ್ಟು 816 ಸ್ಥಾನಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು (ಅಂದರೆ 273 ಸ್ಥಾನಗಳು) ಮಹಿಳೆಯರಿಗೆ ಮೀಸಲಾಗುವುದನ್ನು ಈ ಅಧಿವೇಶನದಲ್ಲಿ ಖಚಿತಪಡಿಸಲಾಗುವುದು.
ಈ ಹಿಂದೆ ಮಹಿಳಾ ಮೀಸಲಾತಿಯು ಹೊಸ ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ (Delimitation) ನಂತರವಷ್ಟೇ ಜಾರಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈಗಿನ ಪ್ರಸ್ತಾವನೆಯಂತೆ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುಹಂಚಿಕೆ ಮಾಡಿ 2029ರ ಸಾರ್ವತ್ರಿಕ ಚುನಾವಣೆಗಿಂತ ಮೊದಲೇ ಮೀಸಲಾತಿ ಜಾರಿಗೆ ತರಲು ಸರ್ಕಾರ ಯೋಜಿಸಿದೆ.ಲೋಕಸಭೆಯ ಬಲವನ್ನು ಹೆಚ್ಚಿಸಲು ಸಂವಿಧಾನದ 81ನೇ ವಿಧಿಗೆ ತಿದ್ದುಪಡಿ ತರಲು ಈ ವಿಶೇಷ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು.








