ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಗೆ ಸಂಬಂಧಿಸಿದಂತೆ, ಈಗಾಗಲೇ ಪ್ರಕಟವಾಗಿರುವ ರಂಗಭೂಮಿಯ ಆಕರ ಗ್ರಂಥಗಳಿಗೆ ಬಹುಮಾನ ನೀಡಲು ತೀರ್ಮಾನಿಸಿದ್ದು, 2021, 2022 ಮತ್ತು 2023ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ ರಂಗಭೂಮಿಯ ಬೆಳವಣಿಗೆ, ವೈವಿಧ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ವಿಮರ್ಶಾತ್ಮಕ ಕೃತಿಗಳಿಗೆ ಬಹುಮಾನ ನೀಡಲಾಗುವುದು. ಪ್ರತಿ ಸಾಲಿಗೆ ತಲಾ ಒಂದು ಪುಸ್ತಕಕ್ಕೆ ಬಹುಮಾನವನ್ನು ನೀಡಲಾಗುವುದು. ಈ ಬಹುಮಾನದ ಮೊತ್ತ ರೂ.25.000/-ಗಳಾಗಿರುತ್ತವೆ. ಕೃತಿಗಳನ್ನು ಲೇಖಕರೇ ನೇರವಾಗಿ ಅಕಾಡೆಮಿಗೆ ಕಳುಹಿಸಿಕೊಡಬೇಕು.
ಕೃತಿಗಳು ಜನವರಿ 2021 ರಿಂದ ಡಿಸೆಂಬರ್ 2023ರೊಳಗೆ ಮುದ್ರಣವಾದ ಮೊದಲ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಪುಸ್ತಕಗಳು ಯಾವುದೇ ಪದವಿಗಾಗಿ ಪಿಹೆಚ್ಡಿಗಾಗಿ ಮತ್ತು ಪಠ್ಯ ಪುಸ್ತಕಕ್ಕೆ ಸಿದ್ಧಪಡಿಸಿದ ವಿಷಯವಾಗಿರಬಾರದು. ಕಳುಹಿಸಲ್ಪಡುವ ಕೃಷಿ ನಾಟಕವಾಗಿರಬಾರದು. ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು. ಮರುಮುದ್ರಣವಾದ ಪುಸ್ತಕಗಳಾಗಿರಬಾರದು. ಅಕಾಡೆಮಿಯ ಸದಸ್ಯರು ರಚಿಸಿದ ಕೃತಿಗಳಾಗಿರಬಾರದು. ಸಂಪಾದಿತ ಕೃತಿಗಳಾಗಿರಬಾರದು. ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು. ಪುಸ್ತಕ ಬಹುಮಾನಕ್ಕೆ ಲೇಖಕರು ಮಾತ್ರ ಅರ್ಹರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಕೃತಿಗಳು ಹಿಂತಿರುಗಿಸಲಾಗುವುದಿಲ್ಲ. ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಸಕ್ತ ಲೇಖಕರು ತಮ್ಮ ಹೆಸರು, ವಿಳಾಸ, ಪ್ರಕಟಣೆ ವರ್ಷ, ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ನೆಲಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಜುಲೈ 20 ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.