ಮೈಸೂರೂ: ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ನಿವಾಸಿ ನಿತೀಶ್ (22) ಎಂಬಾತ ತಂಗಿಯನ್ನು ಕೆರೆಗೆ ದೂಡಿ ಕೊಲೆ ಮಾಡಿದ್ದಾನೆ. ಆಕೆಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಪೊಲೀಸರು ಇದೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ಎಂದು ಶಂಕಿಸಿದ್ದು, ಈ ಪ್ರಕರಣದಲ್ಲಿ ಆರೋಪಿ ಸಹೋದರ ನಿತಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಹಿರಿಯಕ್ಯಾತನಹಳ್ಳಿ ನಿವಾಸಿ ಧನುಶ್ರೀ (19) ಮತ್ತು ತಾಯಿ ಅನಿತಾ (40) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ನಿತಿನ್ ಅವರ ಸಹೋದರಿ ಧನುಶ್ರೀ ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದರಿಂದ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಅವನು ಅವಳೊಂದಿಗೆ ಅನೇಕ ಬಾರಿ ಜಗಳವಾಡಿದ್ದನು ಮತ್ತು ಪ್ರತಿ ಬಾರಿಯೂ ಪೋಷಕರು ಮಧ್ಯಪ್ರವೇಶಿಸಿ ಇಬ್ಬರನ್ನೂ ಶಾಂತಗೊಳಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ತಂಗಿಯು ದೊಡ್ಡಹೆಜ್ಜೂರು ಜಾತ್ರೆಯಲ್ಲಿ ಪ್ರಿಯಕರನ ಜೊತೆ ಇದ್ದಿದ್ದನ್ನು ಕಂಡು ನಿತೀಶ್ ಸಿಟ್ಟಾಗಿದ್ದ. ಈ ವೇಳೆ ಆಕೆ ಪ್ರಿಯಕರನ ಪರವಾಗಿ ವಾದಿಸಿದ್ದಳು ಜೊತೆಗೆ ಯುವಕ, ಆತನ ಸ್ನೇಹಿತರು ಮತ್ತು ನಿತೀಶ್ ನಡುವೆ ಹೊಡೆದಾಟವೂ ನಡೆದಿದೆ ಎನ್ನಲಾಗಿದೆ. ಮಂಗಳವಾರ ಸಂಜೆ ಆರೋಪಿ ನಿತಿನ್ ಹತ್ತಿರದ ಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವ ನೆಪದಲ್ಲಿ ಧನುಶ್ರೀ ಮತ್ತು ತಾಯಿ ಅನಿತಾ ಅವರನ್ನು ತನ್ನ ಬೈಕಿನಲ್ಲಿ ಕರೆದೊಯ್ದಿದ್ದಾನೆ. ಮರೂರು ಕೆರೆಯಲ್ಲಿ ಬೈಕ್ ನಿಲ್ಲಿಸಿ ತಂಗಿಯನ್ನು ಕೆರೆಗೆ ತಳ್ಳಿದ್ದಾನೆ ಎನ್ನಲಾಗಿದೆ.
‘ತಂಗಿಯನ್ನು ನಾನೇ ಕೆರೆಗೆ ತಳ್ಳಿದೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ. ತನಿಖೆ ನಡೆಯುತ್ತಿದೆ’ ಎಂದು ಎಸ್ಪಿ ಸೀಮಾ ಲಾಟ್ಕರ್ ಹೇಳಿದ್ದಾರೆ.