ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಬಿಗುವಿನ ವಾತಾವರಣದ ನಡುವೆಯೂ ಭಾರತದ ಇಂಧನ ಭದ್ರತೆಗೆ ದೊಡ್ಡ ಸಮಾಧಾನ ಸಿಕ್ಕಿದೆ. ಸುಮಾರು 15,400 ಟನ್ ಎಲ್‌ಪಿಜಿ (ಅಡುಗೆ ಅನಿಲ) ಹೊತ್ತ ‘ಗ್ರೀನ್ ಆಶಾ’ (Green Asha) ಎಂಬ ಭಾರತೀಯ ಧ್ವಜದ ಹಡಗು ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಯಶಸ್ವಿಯಾಗಿ ದಾಟಿದೆ. ಈ ಮೂಲಕ ಸಂಕಷ್ಟದ ವಲಯದಲ್ಲಿದ್ದ ಭಾರತದ ಬಹುತೇಕ ಗ್ಯಾಸ್ ಟ್ಯಾಂಕರ್‌ಗಳು ಸುರಕ್ಷಿತವಾಗಿ ಹೊರಬಂದಂತಾಗಿದೆ.
ಫೆಬ್ರವರಿ 28 ರಿಂದ ಈ ಭಾಗದಲ್ಲಿ ಉದ್ವಿಗ್ನತೆ ಆರಂಭವಾದ ನಂತರ, ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ ಭಾರತದ 9ನೇ ಎಲ್‌ಪಿಜಿ ಹಡಗು ಇದಾಗಿದೆ.ಮೂಲಗಳ ಪ್ರಕಾರ, ಈಗ ಈ ಅಪಾಯಕಾರಿ ವಲಯದಲ್ಲಿ ಭಾರತಕ್ಕೆ ಬರಬೇಕಾದ ಕೇವಲ ಒಂದು ಎಲ್‌ಪಿಜಿ ಹಡಗು (ಜಗ್ ವಿಕ್ರಮ್) ಮಾತ್ರ ಬಾಕಿ ಉಳಿದಿದೆ. ಅದು ಕೂಡ ಶೀಘ್ರದಲ್ಲೇ ಜಲಸಂಧಿಯನ್ನು ದಾಟುವ ನಿರೀಕ್ಷೆಯಿದೆ.
ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ಈ ಜಲಸಂಧಿಯನ್ನು ನಿಯಂತ್ರಿಸುತ್ತಿದ್ದರೂ, ಭಾರತದೊಂದಿಗೆ ಇರುವ ಉತ್ತಮ ರಾಜತಾಂತ್ರಿಕ ಸಂಬಂಧದಿಂದಾಗಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಕಲ್ಪಿಸಿಕೊಡಲಾಗುತ್ತಿದೆ.ಈ ಹಡಗು ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಅಲ್ ರಾಮ್ಸ್ ಬಂದರಿನಿಂದ ಹೊರಟು, ಇರಾನ್ ಕರಾವಳಿಗೆ ಹತ್ತಿರವಿರುವ ಸುರಕ್ಷಿತ ಮಾರ್ಗದ ಮೂಲಕ ಸಾಗಿ ಬಂದಿದೆ.








