ಮಡಿಕೇರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ ಗೃಹ ಆರೋಗ್ಯ ಯೋಜನೆ ಕಾರ್ಯಕ್ರಮದ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಅವರು ‘ಗೃಹ ಆರೋಗ್ಯ ಕಾರ್ಯಕ್ರಮ’ದ ಬಗ್ಗೆ ಮಾಹಿತಿಯನ್ನು ನೀಡಿದರು. 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮನೆ ಮನೆಗೆ ತೆರಳಿ ಸಾಂಕ್ರಾಮಿಕ ವಲ್ಲದ ರೋಗಗಳ ತಪಾಸಣೆ ಮತ್ತು ಪರೀಕ್ಷೆ ಮಾಡಲಾಗುತ್ತದೆ. ಯೋಜನೆಯಡಿಯಲ್ಲಿ ಎಲ್ಲಾ ಸಾರ್ವಜನಿಕರ ಆರೋಗ್ಯ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕ ವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ.
ಕೊಡಗಿನಲ್ಲಿ ಜನವರಿ 6 ರಿಂದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಜನತೆಯ ಮನೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ಸಲ್ಲಿಸುವುದು ರಾಜ್ಯ ಸರ್ಕಾರದ ಯೋಜನೆಯಾಗಿದೆ. ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರನ್ನು ಒಳಗೊಂಡ 150 ತಂಡಗಳು ವಾರದಲ್ಲಿ 3 ದಿನ ಪ್ರತಿ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿ ಉಚಿತ ಔಷಧಿ ತಲುಪಿಸಲಾಗುತ್ತದೆ.
ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದೆ. ರಕ್ತದೊತ್ತಡ ಮಧುಮೇಹ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಗರ್ಭ ಕೊರಳಿನ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳು ನಿದ್ರಾಹೀನತೆ ಈ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಲಿದ್ದಾರೆ. ಕ್ಯಾನ್ಸರ್ ಚಿಹ್ನೆ ಲಕ್ಷಣಗಳು ಕಂಡುಬಂದಲ್ಲಿ ತಜ್ಞ ವೈದ್ಯರ ಮೂಲಕ ರೋಗ ನಿರ್ಣಯ ಖಾತ್ರಿಪಡಿಸಿ ಮುಂದಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‍ಒ ಅವರು ಮಾಹಿತಿ ನೀಡಿದರು.
ಭಾರತದಲ್ಲಿ ಒಟ್ಟಾರೆ ಮರಣಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಂದ ಶೇ.61.8 ಮರಣಗಳು ಉಂಟಾಗುತ್ತಿವೆ. ಇದನ್ನು ತಡೆಗಟ್ಟಲು ಶೀಘ್ರ ಪತ್ತೆ ಮತ್ತು ತ್ವರಿತ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಲು ಈ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಶ್ರೀನಿವಾಸ್ ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಗೃಹ ಆರೋಗ್ಯ ಕಾರ್ಯಕ್ರಮವನ್ನು ಸರಿಯಾಗಿ ಮನೆ ಮನೆಗೆ ತಲುಪಿಸಿ ಯಶಸ್ವಿಗೊಳಿಸಲು ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್, ತಾಲೂಕು ಆರೋಗ್ಯ ಅಧಿಕಾರಿಗಳು ಡಾ.ಇಂದೂಧರ್, ಡಾ.ಚೇತನ್, ಡಾ.ಯತಿರಾಜ್ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಡಿಪಿಸಿ ಡಾ.ಶಾಂಭವಿ, ಡಿಪಿಎಂ ದೇವರಾಜು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.