ಬೆಳಗಾವಿ : ರೈತರಿಗಾಗುತ್ತಿರುವ ಶೋಷಣೆಗಳನ್ನು ತಪ್ಪಿಸುವ ಸಲುವಾಗಿ ಜನವರಿ.01 ರಿಂದ ಈವರೆಗಿನ ಎಲ್ ಭೂ-ಮಂಜೂರು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ್ದ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಬಗರ್ ಹುಕುಂ ಯೋಜನೆ ಅಡಿಯಲ್ಲಿ 1999 ರಿಂದ 2004ರ ಅವಧಿಯಲ್ಲಿ ಜಮೀನು ಮಂಜೂರು ಮಾಡಲಾಗಿದ್ದರೂ ಸಾಗುವಳಿ ಚೀಟಿ ನೀಡಿಲ್ಲ, ಕೆಲವರಿಗೆ ಸಾಗುವಳಿ ಚೀಟಿ ನೀಡಿದ್ದರೂ ಖಾತೆ ನೀಡಿಲ್ಲ. ಅಲ್ಲದೆ, ಈ ವರ್ಷ ಬಗರ್ ಹುಕುಂ ಅಡಿಯಲ್ಲಿ ಸಾವಿರಾರು ರೈತರ ಅರ್ಜಿಗಳನ್ನೇ ವಜಾ ಮಾಡಲಾಗಿದೆ. ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ” ಎಂದರು.
ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಈ ಹಿಂದೆ ನಮೂನೆ 50-53 ರ ಅಡಿ ಭೂ ಮಂಜೂರು ಪಡೆಯದವರೂ ಸಹ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಕೆಲವರು ದಾಖಲೆ ಬಚ್ಚಿಟ್ಟು ರೈತರಿಗೆ ಸಮಸ್ಯೆ ನೀಡುತ್ತಿದ್ದಾರೆ. ಬಗರ್ ಹುಕುಂ ಯೋಜನೆ ಅಡಿಯಲ್ಲಿ ನಿಜವಾಗಿಯೂ ಭೂ ಮಂಜೂರು ಮಾಡಿರುವವರಿಗೆ ದಾಖಲೆ ಇಲ್ಲದಂತಾಗಿದೆ. ಹೀಗಾಗಿ ಜನವರಿ 01 ರಿಂದ ಎಲ್ಲಾ ತಾಲೂಕು ಕಚೇರಿಯಲ್ಲಿ ಭೂ-ಮಂಜೂರಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಯೋಜನೆ ರೂಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಅಲ್ಲದೆ, “ಭೂ ಮಂಜೂರಾತಿ ದಾಖಲೆಗಳನ್ನು ಡಿಜಿಟಲೀಕರಿಸುವಾಗ ಹಲವು ರೈತರಿಗೆ ಸಂಬಂಧಿಸಿದ ಹಳೆಯ ದಾಖಲೆಗಳೂ ಲಭ್ಯವಾಗಲಿವೆ. ಇವುಗಳ ಆಧಾರದಲ್ಲಿ ಈ ಹಿಂದೆ ಭೂ ಮಂಜೂರಾಗಿಯೂ ಸಾಗುವಳಿ ಚೀಟಿ ಹಾಗೂ ಖಾತೆ ಪಡೆಯದ ರೈತರಿಗೆ ಸೂಕ್ತ ದಾಖಲೆಗಳನ್ನು ಒದಗಿಸಬಹುದು. ಅಲ್ಲದೆ, ಮುಂದಿನ ದಿನಗಳಲ್ಲಿ ದಾಖಲೆಗಳನ್ನು ತಿದ್ದುವ ಹಾಗೂ ಬಚ್ಚಿಡುವ ಮೂಲಕ ರೈತರನ್ನು ಶೋಷಣೆಗೆ ಒಳಪಡಿಸುವಂತಹ ಕೆಲಸಗಳಿಗೆ ಶಾಶ್ವತ ಪರಿಹಾರವಾಗಲಿದೆ” ಎಂದು ಸದನಕ್ಕೆ ಅವರು ಭರವಸೆ ನೀಡಿದರು.
ಇದೇ ವೇಳೆ ಬಗರ್ ಹುಕುಂ ಯೋಜನೆ ಅಡಿಯಲ್ಲಿ ಗೋಮಾಳ ಜಮೀನು ಮಂಜೂರಾತಿ ವಿಚಾರದಲ್ಲಿನ ಕಾನೂನು ತೊಡಕಿನ ಬಗ್ಗೆಯೂ ಸದಕ್ಕೆ ಮಾಹಿತಿ ನೀಡಿದ ಸಚಿವರು, “ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿ ಹಿಂದಿನಿಂದಲೂ ಅನುಸರಿಸುತ್ತಾ ಬಂದಿರುವ ಕಾನೂನನ್ನೇ ಈಗಲೂ ಅನುಸರಿಸಲಾಗುತ್ತಿದೆ.ಅಲ್ಲದೆ, ಈ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್ ಮೂರು ತೀರ್ಪು ನೀಡಿದೆ. ಹೀಗಾಗಿ ಸರ್ಕಾರದ ಭಾಗವಾಗಿ ಸಚಿವನಾಗಿ ನಾನು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಮೀರಲಾಗದು. ಆದರೂ, ರಾಜ್ಯದ ಕಾನೂನಿಗೆ ಬದ್ದನಾಗಿ ಹೆಚ್ಚುವರಿ ಗೋಮಾಳ ಜಮೀನನ್ನು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದರು. ಅಲ್ಲದೆ, ʼಮಾನ್ಯ ಶಾಸಕರು ದಯವಿಟ್ಟು ಸುಪ್ರೀಂ ಕೋರ್ಟ್ ತೀರ್ಪನ್ನು ಓದಿ ನಂತರ ಈ ಬಗ್ಗೆ ಚರ್ಚಿಸೋಣʼ ಎಂದು ಕಿವಿಮಾತು ಹೇಳಿದರು
ಮುಂದುವರೆದು, “ಪ್ರಸ್ತುತ ರಾಜ್ಯ ಸರ್ಕಾರದ ಬಳಿ ಹೊಸ ಅಂಗನವಾಡಿಗಳ ನಿರ್ಮಾಣಕ್ಕೆ ಜಾಗ ಇಲ್ಲ. 12000 ಸ್ಮಶಾನ ಜಾಗ ಖರೀದಿಗೆ ವರ್ಷಕ್ಕೆ 20 ರಿಂದ 30 ಕೋಟಿ ನೀಡುತ್ತಿದ್ದೇನೆ. ಆಸ್ಪತ್ರೆ ಕಾಲೇಜುಗಳ ನಿರ್ಮಾಣಕ್ಕೂ ಸರ್ಕಾರದ ಬಳಿ ಸ್ವಂತ ಜಾಗವಿಲ್ಲದಂತಾಗಿದೆ. ಸರ್ಕಾರಿ ಜಮೀನಿನ ಜವಾಬ್ದಾರಿ ಕಂದಾಯ ಇಲಾಖೆಗೆ ಕೊಟ್ಟಿದ್ದಾರೆ. ಆದರೆ, ಕಂದಾಯ ಇಲಾಖೆಗೆ ತಾಲೂಕು ಕಚೇರಿ ಕಟ್ಟಲೂ ಜಾಗ ಇಲ್ಲ. ಕೆಲವೆಡೆ ಹೊಸ ತಾಲೂಕು ಕಚೇರಿ ಮಂಜೂರು ಮಾಡಲು ತಾಲೂಕು ಕೇಂದ್ರದಿಂದ 8 ಕಿಮೀ ಹೊರಗೆ ಜಾಗ ತೋರಿಸಿದ್ದಾರೆ. ಹೊಸ ತಾಲೂಕುಗಳಿಗೆ 24 ತಾಲೂಕು ಕಚೇರಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ, ಈಗಲೂ 8 ರಿಂದ 10 ತಾಲೂಕುಗಳಲ್ಲಿ ತಾಲೂಕು ಕಚೇರಿ ಕಟ್ಟಲು ಸರ್ಕಾರಿ ಜಾಗಗಳೇ ಇಲ್ಲ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಬೇಸರ ವ್ಯಕ್ತಪಡಿಸಿದರು.