ಚಿತ್ರದುರ್ಗ : ಸಿರಿಧಾನ್ಯ ಉತ್ಪಾದಕರು, ಮಾರುಕಟ್ಟೆದಾರರು, ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಹಾಗೂ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ “ಸಿರಿಧಾನ್ಯ ಹಬ್” ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಹೇಳಿದರು.
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ದುರ್ಗದ ಸಿರಿ ರೈತ ಉತ್ಪಾದಕ ಕಂಪನಿ ಆವರಣದಲ್ಲಿ ಶುಕ್ರವಾರ ನಡೆದ ಸಿರಿಧಾನ್ಯ ಬೆಳೆಗಾರರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.ಬೆಂಗಳೂರಿನಲ್ಲಿ ಸಿರಿಧಾನ್ಯ ಹಬ್ ನಿರ್ಮಾಣಕ್ಕೆ ಶೀಘ್ರದಲ್ಲಿ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಲಿದ್ದು, ಮುಂದಿನ ಒಂದು ವರ್ಷದೊಳಗೆ ಸಿರಿಧಾನ್ಯ ಹಬ್ ನಿರ್ಮಿಸಲಾಗುವುದು. ಹಾಗಾಗಿ ಸಿರಿಧಾನ್ಯ ಹಬ್‍ನಲ್ಲಿ ಹೆಸರು ನೋಂದಣಿ ಮಾಡಿದರೆ ರಾಷ್ಟ್ರ, ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ವೇದಿಕೆ ಸಿಗಲಿದ್ದು, ಉತ್ತಮ ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ಜ.23 ರಿಂದ 25 ರವರೆಗೆ ಬೆಂಗಳೂರಿನಲ್ಲಿ ಸಾವಯವ ಸಿರಿಧಾನ್ಯ ಅಂತರ ರಾಷ್ಟ್ರೀಯ ಮೇಳ ಹಮ್ಮಿಕೊಳ್ಳಲಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಸಿರಿಧಾನ್ಯದ ಮಹತ್ವ ಎಲ್ಲರಿಗೂ ಪರಿಚಯಿಸಬೇಕು ಎಂಬುದು ಸಿರಿಧಾನ್ಯ ಮೇಳದ ಉದ್ದೇಶ ಎಂದು ಹೇಳಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವಲ್ಲಿ ಹೊಸದುರ್ಗ ತಾಲ್ಲೂಕು ಮುಂಚೂಣಿಯಲ್ಲಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಶೇ.90ರಷ್ಟು ಸಿರಿಧಾನ್ಯ ಬೆಳೆಯಲಾಗುತ್ತದೆ. ಹೊಸದುರ್ಗ ತಾಲ್ಲೂಕಿಗೆ ಇಲ್ಲಿಯವರೆಗೂ ಸಿರಿಧಾನ್ಯ ಬೆಳೆಗೆ ಸಿರಿಯೋಜನೆಯಡಿ ರೂ.33.96 ಕೋಟಿ ಸಹಾಯಧನ ನೀಡಲಾಗಿದ್ದು, ಕಳೆದ ವರ್ಷ ರೂ.15 ಕೋಟಿ ಸಹಾಯಧನ ಹೊಸದುರ್ಗ ತಾಲ್ಲೂಕಿಗೆ ನೀಡಿದೆ. ಈ ಯೋಜನೆಯಡಿ ರಾಜ್ಯದ 45 ಸಾವಿರ ಫಲಾನುಭವಿಗಳ ಪೈಕಿ ಹೊಸದುರ್ಗ ತಾಲ್ಲೂಕಿನಲ್ಲಿಯೇ 35 ಸಾವಿರ ಫಲಾನುಭವಿಗಳು ಇರುವುದು ಹೆಮ್ಮೆಯ ಸಂಗತಿ. ಹಾಗಾಗಿ ಶಾಸಕ ಗೋವಿಂದಪ್ಪನವರಿಗೆ ಇಲ್ಲಿನ ರೈತರ ಪರವಾಗಿ ಅಂತರ ರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಸನ್ಮಾನಿಸಲಾಗುವುದು ಎಂದರು.
ಸಾವಯವ ಗೊಬ್ಬರ ಬಳಸಿದಲ್ಲಿ ಸಿರಿಧಾನ್ಯದ ಇಳುವರಿ ಹೆಚ್ಚಾಗುತ್ತದೆ. ರಸಗೊಬ್ಬರ ಕಡಿಮೆ ಮಾಡಿದಷ್ಟು ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಸಿರಿಧಾನ್ಯ ರೋಗ ನಿರೋಧಕ ಶಕ್ತಿ ಇರುವ ಆಹಾರ. ಈ ಆಹಾರ ಸೇವನೆಯಿಂದ ಹೆಚ್ಚು ಕಾಲ ಆರೋಗ್ಯವಂತರಾಗಿ ಇರಲಿಕ್ಕೆ ಸಹಕಾರಿ ಆಗಲಿದೆ ಎಂದರು.
ಕೆಲವೇ ತಾಲೂಕುಗಳಿಗೆ ಮೀಸಲಾಗಿದ್ದ ಕೃಷಿಹೊಂಡ ನಿರ್ಮಾಣ ಸೌಲಭ್ಯವನ್ನು ರಾಜ್ಯದ ಎಲ್ಲ ತಾಲ್ಲೂಕುಗಳಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ ಅವರು, ಪಂಚ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಕ್ಕೂ ಒತ್ತು ನೀಡಲಾಗಿದೆ. ನಿರಂತರವಾಗಿ ರೈತಪರವಾಗಿರುವ ಸರ್ಕಾರ ನಮ್ಮದು ಎಂದರು.
ಕೃಷಿಯನ್ನು ಖುಷಿಯಿಂದ ಮಾಡಿದಲ್ಲಿ ಮಾತ್ರ ರೈತರು ಅಭಿವೃದ್ಧಿ ಕಾಣಲು ಸಾಧ್ಯ. ಸಮಗ್ರ ಕೃಷಿಪದ್ಧತಿ ಅಳವಡಿಸಿಕೊಂಡಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ರೈತರು ಕೃಷಿ ವಿಶ್ವವಿದ್ಯಾನಿಲಯ, ತಜ್ಞರು ಹಾಗೂ ಅಧಿಕಾರಿಗಳ ಸಲಹೆ, ಮಾರ್ಗದರ್ಶನ ಪಡೆದು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ವಾತಾವರಣಕ್ಕೆ ಹೊಂದಿಕೊಳ್ಳುವ ಬೆಳೆ ಬೆಳೆಯಬೇಕು. ರೈತರು ಬೆಳೆದಲ್ಲಿ ದೇಶ ಸುಭಿಕ್ಷತೆಯಿಂದಿರಲು ಸಾಧ್ಯ. ಯಾವ ಕಂಪನಿಗಳಿಂದಲ್ಲ ಎಂದು ಅಭಿಪ್ರಾಯಪಟ್ಟರು ಅವರು, ಸಿರಿಧಾನ್ಯ ನಾಡಾಗಿರುವ ಹೊಸದುರ್ಗ ತಾಲ್ಲೂಕಿಗೆ ಸಿರಿಧಾನ್ಯ ಬೆಳೆ ಪ್ರೋತ್ಸಾಹಕ್ಕಾಗಿ ಇಲಾಖೆಯಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.