ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ಈಗಿರುವ 7 ಗಂಟೆಯ ಜೊತೆಗೆ ಹೆಚ್ಚುವರಿಯಾಗಿ 2 ತಾಸು 3 ಫೇಸ್ ವಿದ್ಯುತ್ ಪೂರೈಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಕಾಂಗ್ರೆಸ್‌ನ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ಕೆಲವು ಸಬ್ ಸ್ಟೇಷನ್‌ಗಳಲ್ಲಿ ಹೆಚ್ಚು ಸಾಮರ್ಥ್ಯವಿಲ್ಲ. ಹಾಗಾಗಿ ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ತಿಳಿಸಲಾಗುವುದು ಎಂದರು.
ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ನಿರಂತರವಾಗಿ ಏಳು ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇಲ್ಲದಿರುವ ವೇಳೆ ವಿದ್ಯುತ್ ಉಪಕೇಂದ್ರಗಳಿಂದ ಪಾಳಿಯಲ್ಲಿ ಹಗಲು ನಾಲ್ಕು ಗಂಟೆ, ರಾತ್ರಿ 3 ಗಂಟೆ ಕಾಲ 3 ಫೇಸ್ ವಿದ್ಯುತ್ ನೀಡ ಲಾಗುತ್ತಿದೆ. ಕೆಲವು ಕಡೆ ನಿರಂತರವಾಗಿ 7 ಗಂಟೆ ಪೂರೈಕೆ ಮಾಡಿದರೆ ಪಂಪ್‌ಸೆಟ್‌ಗಳಿಗೆ ಸಾಮರ್ಥವಿಲ್ಲ ಎಂದು ರೈತರೇ ಹೇಳುತ್ತಿದ್ದಾರೆ. ಹೀಗಾಗಿ ಎರಡು ಪಾಳಿಯಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಇನ್ನು ಅಕ್ರಮ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಇನ್ನೊಂದು ವರ್ಷದಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಕಾರ್ಯ ಮುಗಿಯಲಿದೆ ಎಂದು ಹೇಳಿದರು.