ಬೆಂಗಳೂರು : ಕನ್ನಡಿಗರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ರೈಲು ನಿಲ್ದಾಣಗಳಲ್ಲಿ ಕನ್ನಡ ಭಾಷೆಯಲ್ಲೂ ಪ್ರಕಟಣೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಯಾಗ್ ರಾಜ್ ನಲ್ಲಿ ಕನ್ನಡದ ಕಂಪು! 2025ರ ಜನವರಿ 13 ರಿಂದ ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ಆರಂಭವಾಗಲಿದೆ. ಈ ಕುಂಭಮೇಳಕ್ಕೆ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಭಕ್ತರು ರೈಲುಗಳ ಮೂಲಕ ಆಗಮಿಸುತ್ತಾರೆ. ಈ ವೇಳೆ, ಭಿನ್ನ ಪ್ರಾದೇಶಿಕ ಭಾಷೆ ಮಾತನಾಡುವವರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಠಿಯಿಂದ, ಕುಂಭಮೇಳದ ವೇಳೆ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಸೇರಿದಂತೆ 12 ಭಾಷೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ.
ದೇಶದ ವಿಶಾಲವಾದ ಭಾಷಾ ವೈವಿಧ್ಯತೆಯ ಜೊತೆಗೂಡಿ ಭಾರತೀಯ ರೈಲ್ವೆಯು ಸಮರ್ಥವಾಗಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.