ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ರಾಜ್ಯದ 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ ₹3,000 ನೀಡಲು ತೀರ್ಮಾನಿಸಲಾಗಿದೆ.
ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, ಬರದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಳೆಯಾಶ್ರಿತ ಮತ್ತು ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು. ಇದರಿಂದ ಸುಮಾರು 7 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದ 3,457 ಕೋಟಿ ರೂ. ಬರಪರಿಹಾರ ಹಣವನ್ನು 27.5ಲಕ್ಷ ರೈತರಿಗೆ ಹಂಚಿಕ ಬಳಿಕ ಉಳಿದಿರುವ 808ಕೋಟಿ ರೂ. ಹಣದಲ್ಲಿ ಹೆಚ್ಚುರಿಯಾಗಿ ಏಳು ಲಕ್ಷ ರೈತರಿಗೆ ಬರಪರಿಹಾರ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.
ಇನ್ನು ಎನ್ ಡಿಆರ್ ಎಫ್ ಅಡಿ ರಾಜ್ಯಕ್ಕೆ ಹೆಚ್ಚುರಿಯಾಗಿ ಹಂಚಿಕೆಯಾಗಿರುವ 232 ಕೋಟಿ ರೂ.ಗಳಿಗೆ ರಾಜ್ಯ ಸರ್ಕಾರ ಇನ್ನೂ 232 ಕೋಟಿ ರೂ. ಸೇರಿಸಿ 17ಲಕ್ಷ ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರವಾಗಿ 2,800 ರೂ.ನಿಂದ 3000 ರೂ. ವರೆಗೆ ಹೆಚ್ಚುವರಿ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.