ಬೆಂಗಳೂರು : ಅಕ್ರಮ-ಸಕ್ರಮದಡಿ ಜಮೀನು ಹೊಂದಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.
ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಸಭೆ ನಡೆಸಲಾಯಿತು. ಈ ವೇಳೆ ಬಗರ್ ಹುಕುಂ ಹಾಗೂ ನಮೂನೆ 1 ರಿಂದ 5 ದುರಸ್ಥಿ ಕಾರ್ಯಗಳ ಪ್ರಗತಿ ಕುರಿತ ಪರಿಶೀಲಿಸಲಾಯಿತು.30 ವರ್ಷಕ್ಕೂ ಅಧಿಕ ಅವಧಿಯಿಂದ ಮಂಜೂರಾದ ಸರ್ಕಾರಿ ಜಮೀನುಗಳು ಪೋಡಿ ಆಗದೆ ಲಕ್ಷಾಂತರ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪೋಡಿ ದರಸ್ತಿ ಅಭಿಯಾನ ಆರಂಭಿಸಿದ್ದು, ಈ ತಿಂಗಳಾಂತ್ಯಕ್ಕೆ 50,000 ರೈತರ ಜಮೀನು ಸರ್ವೆಗೆ ಸೂಚನೆ ನೀಡಲಾಗಿದೆ.
ಇದುವರೆಗೆ ಪೋಡಿ ದುರಸ್ತಿ ಅಭಿಯಾನದಡಿ 29,778 ಸರ್ವೇ ನಂಬರ್ ಗಳಿಗೆ 1ರಿಂದ 5ಕಡತ ಸಿದ್ಧಪಡಿಸಲಾಗಿದೆ. ಇವುಗಳಲ್ಲಿ 11,436 ರೈತರ ಜಮೀನು ಸರ್ವೆಗೆ ಆದೇಶಿಸಲಾಗಿದೆ. ತಿಂಗಳಾಂತ್ಯಕ್ಕೆ 50,000 ರೈತರ ಜಮೀನು ಸರ್ವೆಗೆ ಆದೇಶಿಸಲು ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೀವ್ರ ತೊಂದರೆಗೆ ಸಿಲುಕಿದ್ದು, ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಮುಂದಾಗಬೇಕು, ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಹೇಳಿದ್ದಾರೆ.