ರಾಷ್ಟ್ರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಇದೇ ಸೆ.13 ರಂದು ಈ ವರ್ಷದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಬಾಕಿ ಇರುವ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಮೋದ್ ಬಿ.ಜಿ ಅವರು ಕರೆ ನೀಡಿದರು.
ನಗರದ ತಾಳೂರು ರಸ್ತೆಯ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಉಭಯ ಕಕ್ಷಿದಾರರ ಪರಸ್ಪರ ಹೊಂದಾಣಿಕೆಗಾಗಿ ಮತ್ತು ತ್ವರಿತ ನ್ಯಾಯಕ್ಕಾಗಿ ರಾಷ್ಟಿçÃಯ ಲೋಕ್ ಅದಾಲತ್ ಸಹಕಾರಿ. ಅಖಂಡ (ಬಳ್ಳಾರಿ ಮತ್ತು ವಿಜಯನಗರ) ಜಿಲ್ಲೆಯ 31 ನ್ಯಾಯಾಲಯಗಳಲ್ಲಿ ಅಂದು ಬಗೆಹರಿಸಬಹುದಾದ ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಹಾಗೂ ನ್ಯಾಯಾಲಯದ ಶುಲ್ಕವನ್ನು ಮರು ಪಾವತಿಸಲಾಗುತ್ತದೆ ಎಂದರು.
ವೈವಾಹಿಕ, ಕೌಟುಂಬಿಕ, ಮೋಟಾರು ಅಪಘಾತ, ಚೆಕ್ ಅಮಾನ್ಯದ, ವಾಣಿಜ್ಯ, ಸೇವಾ ಪ್ರಕರಣಗಳು ಮತ್ತು ರಾಜೀಯಾಗಬಲ್ಲ, ಗ್ರಾಹಕ ವ್ಯಾಜ್ಯ, ಡಿಆರ್ ಟಿ, ಪಾಲುದಾರಿಕೆ, ಸಾರಿಗೆ ಹಾಗೂ ಇತರೇ ಸಿವಿಲ್ ಪ್ರಕರಣಗಳು ಸೇರಿದಂತೆ ಎಲ್ಲಾ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಲೋಕ್ ಅದಾಲತ್ ನಲ್ಲಿ ಜನರಿಗೆ ಸುಲಭವಾಗಿ, ವೇಗವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಲಾಗುತ್ತದೆ. ಇದರಿಂದ ನ್ಯಾಯಾಲದ ಮೇಲಿನ ಹೊರೆ ಇಳಿಕೆಯಾಗಲಿದೆ. ನ್ಯಾಯಾಧೀಶರು ಹೆಚ್ಚು ಸಂಕೀರ್ಣವಾದ ಪ್ರಕರಣಗಳ ಮೇಲೆ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ – 90 ದಿನಗಳ ವಿಶೇಷ ಅಭಿಯಾನ:
ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ವಿಲೇವಾರಿಗಾಗಿ ಈಗಾಗಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕಳೆದ ಜುಲೈ 1 ರಿಂದ ಆರಂಭಗೊಂಡಿರುವ “ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ – 90 ದಿನಗಳ ವಿಶೇಷ ಅಭಿಯಾನ” ಬರುವ ಅಕ್ಟೋಬರ್ 07 ರಂದು ಮುಕ್ತಾಯಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯ ಕಕ್ಷಿದಾರರು ಇದರ ಲಾಭ ಪಡೆಯುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಸಹ ಅವರು ಹೇಳಿದರು.
ಇದು ರಾಜ್ಯವ್ಯಾಪಿ ನಡೆಯುತ್ತಿರುವ ಅಭಿಯಾನವಾಗಿದ್ದು, ತರಬೇತಿ ಪಡೆದ ನುರಿತ ಹಿರಿಯ ವಕೀಲರು ಮಧ್ಯಸ್ಥಿಕೆ ವಹಿಸುತ್ತಾರೆ. ಜಿಲ್ಲೆಯಲ್ಲೂ ತರಬೇತಿ ಪಡೆದ ವಕೀಲರಿಂದ ಯಶಸ್ವಿಯಾಗಿ ನಡೆಯುತ್ತಿದೆ. ಇಲ್ಲಿ ಉಭಯ ಪಕ್ಷಗಾರರನ್ನು ಕರೆಸಿಕೊಂಡು ನ್ಯಾಯಾಲಯಗಳ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ರಾಜೀ ಸಂಧಾನ ಮಾಡುವ ಮೂಲಕ ಬಗೆಹರಿಸಲಾಗುತ್ತದೆ. ಇದನ್ನು ಗೌಪ್ಯವಾಗಿಯೂ ಸಹ ಇಡಲಾಗುತ್ತದೆ. ಇಂತಹ ವಿಶೇಷ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ದಂಡ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ:
ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಸಂಚಾರಿ ಇ-ಚಾನೆಲ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿದ್ದು, ಸೆ.12 ರ ವರೆಗೆ ಈ ರಿಯಾಯಿತಿ ಸೌಲಭ್ಯವು ಇರಲಿದೆ. ಸೆಪ್ಟೆಂಬರ್ 13 ರಂದು ನಡೆಯಲಿರುವ ರಾಷ್ಟಿçÃಯ ಲೋಕ್ ಅದಾಲತ್ ಪ್ರಯುಕ್ತ ಈ ರಿಯಾಯಿತಿ ನೀಡಲಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತ್ತು ದುರ್ಬಲ ವರ್ಗದ ಜನರಿಗೆ ಕಾನೂನಿನ ನೆರವು ನೀಡಲು ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಮಾನವ ಕಳ್ಳ ಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆ ಸಂತ್ರಸ್ತರಿಗೆ, ಅಸಂಘಟಿತ ವಲಯ ಕಾರ್ಮಿಕರಿಗೆ, ಮಾನಸಿಕ ಅಸ್ವಸ್ಥತೆ ಮತ್ತು ಬುದ್ಧಿ ಮಾಂದ್ಯತೆ ಇರುವ ವ್ಯಕ್ತಿಗಳಿಗೆ ಕಾನೂನು ಸೇವೆಗಳು, ಬುಡಕಟ್ಟು ಹಕ್ಕುಗಳ ರಕ್ಷಣೆ ಮತ್ತು ಜಾರಿ, ಬಡತನ ನಿವಾರಣಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಆಸಿಡ್ ದಾಳಿಯ ಸಂತ್ರಸ್ತರಿಗೆ ಕಾನೂನು ಸೇವೆಗಳ ಒದಗಿಸುವ ಯೋಜನೆಗಳನ್ನು ಜಾರಿಗೊಳಿಸಿರುವುದಲ್ಲದೇ, ಅವುಗಳನ್ನು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಗುರಿಯನ್ನು ಸಹ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.