ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಸ್ಟಾಂಪು(ತಿದ್ದುಪಡಿ) ಅಧಿನಿಯಮಕ್ಕೆ ತಿದ್ದುಪಡಿಯನ್ನು ಕಳೆದ ವಿಧಾನಸಭೆಯ ಅವಧಿಯಲ್ಲಿ ತರಲಾಗಿತ್ತು. ಅದನ್ನು ಉಭಯ ಸದನಗಳನಲ್ಲೂ ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಇಂದು ರಾಜ್ಯಪಾಲರು ಅದಕ್ಕೆ ಅಂಕಿತದ ಮುದ್ರೆ ಒತ್ತಿದ್ದಾರೆ. ಹೀಗಾಗಿ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಮೂಲಕ ರಾಜ್ಯದ ಜನತೆಗೆ ಸ್ಟಾಂಪ್ ಡ್ಯೂಟಿ ಹೆಚ್ಚಳ ( Stamp Duty Hike ) ಮಾಡಿ ಸರ್ಕಾರ ಆದೇಶಿಸಿದಂತೆ ಆಗಿ, ಶಾಕ್ ನೀಡಲಾಗಿದೆ.
ಈ ಕುರಿತಂತೆ ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಿಂದ ವಿಶೇಷ ರಾಜ್ಯಪತ್ರಿಕೆ ಹೊರಡಿಸಲಾಗಿದೆ. ಅದರಲ್ಲಿ ಕರ್ನಾಟಕ ಸ್ಟಾಂಪು (ತಿದ್ದುಪಡಿ) ಅಧಿನಿಯಮ, 2023ಕ್ಕೆ ರಾಜ್ಯಪಾಲರಿಂದ ಅಧಿಕೃತಗೊಳಿಸಲಾಗಿದೆ. ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎಂದಿದ್ದಾರೆ.
ಯಾವುದಕ್ಕೆ ಎಷ್ಟು ಹೆಚ್ಚಾಗಲಿದೆ ಶುಲ್ಕ?
ರಾಜ್ಯಪತ್ರದಲ್ಲಿ ಪ್ರಕಟಿತ ತಿದ್ದುಪಡಿ ದರದ ಪ್ರಕಾರ, ದತ್ತು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕ 500 ರಿಂದ 1,000 ರೂ.ಗೆ ಏರಿಕೆಯದಂತೆ ಆಗಿದೆ. ಸದ್ಯ 20 ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಹೊಂದಿರುವ ಅಫಿಡವಿಟ್ಗಳಿಗೆ ಮುಂದೆ 100 ರೂಪಾಯಿ ವರೆಗೆ ಮುದ್ರಾಂಕ ಶುಲ್ಕ ವಿಧಿಸಲಾಗುತ್ತದೆ.
ಪವರ್ ಆಫ್ ಅಟಾರ್ನಿ ಮೇಲಿನ ಮುದ್ರಾಂಕ ಶುಲ್ಕವನ್ನು 100 ರೂ.ನಿಂದ 500 ರೂ.ಗೆ ಹೆಚ್ಚಿಸಲಾಗಿದೆ. ಐದಕ್ಕಿಂತ ಹೆಚ್ಚು ಮಂದಿ, ಆದರೆ 10 ಕ್ಕಿಂತ ಕಡಿಮೆ ವ್ಯಕ್ತಿಗಳು ಜಂಟಿಯಾಗಿ ಪವರ್ ಆಫ್ ಅಟಾರ್ನಿ ನೀಡುವುದಾದರೆ ಅದರ ಮೇಲಿನ ಮುದ್ರಾಂಕ ಶುಲ್ಕ 200 ರೂ.ನಿಂದ 1,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ನಗರ ಪ್ರದೇಶಗಳಲ್ಲಿರುವ ಆಸ್ತಿ ವಿಭಜನಾ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಪ್ರತಿ ಷೇರಿಗೆ 1,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲಾಗಿದೆ. ನಗರ ಮಿತಿಯಿಂದ ಹೊರಗಿರುವ ಆಸ್ತಿಗಳಿಗೆ, ಪ್ರಸ್ತುತ 500 ರೂ. ಬದಲಾಗಿ ಪ್ರತಿ ಷೇರಿಗೆ 3,000 ರೂ. ಮಾಡಲಾಗಿದೆ. ಕೃಷಿ ಆಸ್ತಿಗಳನ್ನು ವಿಭಜಿಸಲು ಪ್ರತಿ ಷೇರಿಗೆ 250 ರೂ. ಬದಲಾಗಿ 1,000 ರೂ.ಗೆ ಹೆಚ್ಚಿಸಲಾಗಿದೆ.
ವಿಚ್ಛೇದನ ಪತ್ರಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಕೂಡ 100 ರಿಂದ 500 ರೂ.ಗೆ ಹೆಚ್ಚಾಗಲಿದೆ. ಪ್ರಮಾಣೀಕೃತ ಪ್ರತಿಗಳಿಗೆ, ಸ್ಟ್ಯಾಂಪ್ ಸುಂಕವನ್ನು 5 ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೇ ಟ್ರಸ್ಟ್‌ಗಳನ್ನು ನೋಂದಾಯಿಸುವುದು ಸಹ ದುಬಾರಿಯಾಗಲಿದೆ. ಕಂಪನಿಗಳ ವಿಲೀನ ಮತ್ತಿತರ ಪ್ರಕ್ರಿಯೆಗಳ ಶುಲ್ಕದಲ್ಲೂ ಸಹ ಹೆಚ್ಚಳವಾಗಲಿದೆ.
ಹೀಗೆದೆ ಗೆಜೆಟ್ ಅಧಿಸೂಚನೆಯ ಸಂಪೂರ್ಣ ಕಾಪಿ. ಯಾವುದಕ್ಕೆ ಎಷ್ಟು ದರ ಹೆಚ್ಚಳ ಅಂತ ನೀವೇ ನೋಡಿ.