ಬೆಂಗಳೂರು: ಕೇವಲ ಬಿಬಿಎಂಪಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ಕಳೆದ 10 ವರ್ಷಗಳಲ್ಲಿ ಬಿಡುಗಡೆಯಾಗಿರುವ 46,300 ಕೋಟಿ ರೂಪಾಯಿಗಳಷ್ಟು ಬೃಹತ್ ಪ್ರಮಾಣದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬೃಹತ್ ಹಗರಣ ಬಯಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷರು ಹಾಗೂ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕರಾದಂತ ಎನ್ ಆರ್ ರಮೇಶ್ ಲೋಕಾಯುಕ್ತ ಎಡಿಜಿಪಿಗೆ ದಾಖಲೆ ಸಹಿತ ದೂರು ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳ ವ್ಯಾಪ್ತಿಯಲ್ಲಿರುವ ಮುಖ್ಯರಸ್ತೆಗಳು ಮತ್ತು ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು 2013-14 ರಿಂದ 2023-24 ರವರೆಗಿನ 10 ವರ್ಷಗಳ ಅವಧಿಯಲ್ಲಿ ವಿವಿಧ ಅನುದಾನಗಳ ಮೂಲಕ ಒಟ್ಟು ₹ 46,292.23 ಕೋಟಿ (ನಲವತ್ತಾರು ಸಾವಿರದ ಇನ್ನೂರಾ ತೊಂಬತ್ತೆರಡು ಕೋಟಿ ಇಪ್ಪತ್ತ ಮೂರು ಲಕ್ಷ) ರೂಪಾಯಿಗಳಷ್ಟು ಬೃಹತ್ ಮೊತ್ತ ಬಿಡುಗಡೆಯಾಗಿರುತ್ತದೆ !!!
ಮೇಲ್ಸೇತುವೆಗಳು, ಕೆಳ ಸೇತುವೆಗಳು ಮತ್ತು White Topping ರಸ್ತೆಗಳನ್ನು ಹೊರತುಪಡಿಸಿ ಕೇವಲ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿಯೇ ಇಷ್ಟೊಂದು ಬೃಹತ್ ಪ್ರಮಾಣದ ಸರ್ಕಾರಿ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ !!!
ಇಷ್ಟು ಬೃಹತ್ ಪ್ರಮಾಣದ ಅನುದಾನಗಳ ಮೂಲಕ “ರಸ್ತೆಗಳ ಮೂಲಭೂತ ಸೌಕರ್ಯ ಇಲಾಖೆ” ಮತ್ತು “ವಿಭಾಗ”ಗಳ ಮೂಲಕ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಸಹ ಪ್ರತೀ ವರ್ಷ ಕನಿಷ್ಠ 25,000 ಕ್ಕೂ ಹೆಚ್ಚು ರಸ್ತೆ ಗುಂಡಿಗಳು ಸೃಷ್ಟಿಯಾಗುತ್ತಿವೆ !!!
ದಿನಾಂಕ 11/10/2024 ರಿಂದ 24/10/2024 ರವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ಯಿಯಲ್ಲಿರುವ 1,980 ಕಿ. ಮೀ. ಉದ್ದದ Arterial, Sub-Arterial ಮತ್ತು ಮುಖ್ಯ ರಸ್ತೆಗಳಲ್ಲಿ ಖುದ್ದಾಗಿ ಪರಿಶೀಲಿಸಿದ ಸಂದರ್ಭದಲ್ಲಿ ಸುಮಾರು 30,000 ಕ್ಕೂ ಹೆಚ್ಚು ರಸ್ತೆಗುಂಡಿಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ !!!
ಕಳೆದ 10 ವರ್ಷಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ಬಿಡುಗಡೆಯಾಗಿರುವ ₹ 46,300 ಕೋಟಿ ರೂಪಾಯಿಗಳಷ್ಟು ಬೃಹತ್ ಪ್ರಮಾಣದ ಅನುದಾನವನ್ನು ನಿಜಕ್ಕೂ ಸದ್ಭಳಕೆ ಮಾಡಿದ್ದೇ ಆದಲ್ಲಿ, ಪಾಲಿಕೆ ವ್ಯಾಪ್ತಿಯಲ್ಲಿರುವ 1,980 ಕಿ. ಮೀ. ಉದ್ದದ ಬೃಹತ್ ರಸ್ತೆಗಳ ಪಾದಚಾರಿ ಮಾರ್ಗಗಳಿಗೆ “ಚಿನ್ನದ ತಗಡು”ಗಳನ್ನೇ ಅಳವಡಿಸಬಹುದಾಗಿತ್ತು.
ಇಷ್ಟು ಬೃಹತ್ ಪ್ರಮಾಣದ ಅನುದಾನಗಳು ಬಿಡುಗಡೆಯಾಗಿದ್ದರೂ ಸಹ ಕಳೆದ 10 ವರ್ಷಗಳಿಂದ ದೇಶದ ಬೇರ್ಯಾವುದೇ ನಗರ ಪ್ರದೇಶಗಳಿಗಿಂತಲೂ ಅತಿ ಹೆಚ್ಚು ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿರುವುದು ಮತ್ತು ನಿರಂತರವಾಗಿ 198 ವಾರ್ಡ್ ಗಳ ವ್ಯಾಪ್ತಿಯ ರಸ್ತೆಗಳು ಮತ್ತು ಮುಖ್ಯರಸ್ತೆಗಳಲ್ಲಿ ಹತ್ತಾರು ಸಾವಿರ ರಸ್ತೆಗುಂಡಿಗಳು ಒಂದರ ಹಿಂದೆ ಒಂದರಂತೆ ಸೃಷ್ಟಿಯಾಗುತ್ತಿರುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಭ್ರಷ್ಟಾಚಾರ ವ್ಯವಸ್ಥೆಗೆ ಅತ್ಯಂತ ಸ್ಪಷ್ಟವಾಗಿ ಹಿಡಿದ ಕೈಗನ್ನಡಿಯಾಗಿರುತ್ತದೆ.
ಬಿಬಿಎಂಪಿ ವ್ಯಾಪ್ತಿಯ ಕಳಪೆ ಗುಣಮಟ್ಟದ ಡಾಂಬರೀಕರಣ / ಕಾಂಕ್ರೀಟ್ ಕಾಮಗಾರಿಗಳಿಗೆ ಪ್ರಮುಖ ಕಾರಣಗಳು
01) ಮಿತಿ ಮೀರಿದ ಭ್ರಷ್ಟಾಚಾರದ ವ್ಯವಸ್ಥೆ :
* ಬಿಬಿಎಂಪಿ ವ್ಯಾಪ್ತಿಯ ಯಾವುದೇ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಅನುಮೋದನೆಯಾಗುವ ಮೊದಲ ಪ್ರಾಥಮಿಕ ಹಂತದಿಂದ ಹಿಡಿದು ಗುತ್ತಿಗೆದಾರನಿಗೆ ಹಣ ಬಿಡುಗಡೆಯಾಗುವ ವರೆಗಿನ ಎಲ್ಲಾ ಹಂತಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.
* ಕೆಳ ಹಂತದಿಂದ ಹಿಡಿದು ಮೇಲಿನ ಹಂತದವರೆಗೆ ಯಾವುದೇ ಒಬ್ಬ ಅಧಿಕಾರಿಯು ತಮ್ಮ ಪಾಲಿನ ಕಮಿಷನ್ ಮೊತ್ತ ಪಾವತಿಯಾಗದೇ ಟೆಂಡರ್ಗಡಳ ಅನುಮೋದನೆಯನ್ನೂ ನೀಡುವುದಿಲ್ಲ ಮತ್ತು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಕಡತಗಳಿಗೆ ಸಹಿಯನ್ನೂ ಹಾಕುವುದಿಲ್ಲ.
* ಟೆಂಡರ್ ಅನುಮೋದನೆ ಮಾಡಬೇಕಾದ ವಿಭಾಗಗಳ ಮತ್ತು ಇಲಾಖೆಗಳ ಕಾರ್ಯಪಾಲಕ ಅಭಿಯಂತರರು ಮತ್ತು ವಲಯ ಮಟ್ಟದಲ್ಲಿ ಅನುಮೋದಿಸಬೇಕಾದ ಮುಖ್ಯ ಅಭಿಯಂತರರು ಹಾಗೂ ವಲಯ ಆಯುಕ್ತರು ಮತ್ತು ಕೇಂದ್ರ ಕಛೇರಿಯ ಅಧಿಕಾರಿಗಳು – ನಿಗದಿಯಾಗಿರುವ ಇಂತಿಷ್ಟು ಪ್ರಮಾಣದ ಕಮಿಷನ್ ಹಣವನ್ನು ಪಾವತಿಸಿದ ನಂತರವಷ್ಟೇ ಟೆಂಡರ್ ಗಳ ಅನುಮೋದನೆ ಆಗುತ್ತದೆ.
* ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ / ಯೋಜನೆ (ಕೇಂದ್ರ) ಇಲಾಖೆ / ವಿಭಾಗಗಳ ಕಿರಿಯ ಅಭಿಯಂತರರು / ಸಹಾಯಕ ಅಭಿಯಂತರರ ಕಛೇರಿಯಿಂದ ಹಿಡಿದು ಟೆಂಡರ್ ನ ಅಂತಿಮ ಹಂತದ ಅನುಮೋದನೆಯಾಗಬೇಕಾದ ನಗರಾಭಿವೃದ್ಧಿ ಇಲಾಖೆಯ ಕಛೇರಿ ಮತ್ತು ವಿಧಾನಸೌಧದ (?) ಕಛೇರಿಗಳ ವರೆಗೆ ವ್ಯಾಪಕವಾದ ಭ್ರಷ್ಟಾಚಾರಗಳು ನಡೆಯುತ್ತಿದ್ದು, ಪ್ರತಿಯೊಬ್ಬ ಅಧಿಕಾರಿಗೂ ಅವರ ಸ್ಥಾನಮಾನಕ್ಕೆ ತಕ್ಕ ಹಾಗೆ ಕಮಿಷನ್ Percentage ಬಗ್ಗೆ ನಿಗದಿಯಾಗಿದೆ.
* ಟೆಂಡರ್ ಅನುಮೋದನೆಯಾಗಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಗುಣಮಟ್ಟ ನಿಯಂತ್ರಣ ಇಲಾಖೆಯ ಅಧಿಕಾರಿಗಳು, PMC Agency ಗಳು, TVCC ಇಲಾಖೆಯ ಅಧಿಕಾರಿಗಳಿಗೆ ಇಂತಿಷ್ಟು ಪ್ರಮಾಣದ ಕಮಿಷನ್ ಹಣವನ್ನು ಪಾವತಿಸಿದ ನಂತರವಷ್ಟೇ ಅವರು ಕಾಮಗಾರಿಗೆ ಸಂಬಂಧಪಟ್ಟ ಧೃಢೀಕೃತ ಪತ್ರಗಳನ್ನು ನೀಡುತ್ತಿರುವ ವ್ಯವಸ್ಥೆ ಯಾವುದೇ ಎಗ್ಗಿಲ್ಲದೇ ಸಾಗಿದೆ.
* ಕಾಮಗಾರಿ ಮುಗಿದ ನಂತರ Bill Register (BR) ಮತ್ತು Measurement Book (MB) Entry ಮಾಡಲು ಕಿರಿಯ ಅಭಿಯಂತರರು / ಸಹಾಯಕ ಅಭಿಯಂತರರಿಂದ ಪ್ರಾರಂಭಿಸಿ – ಸಹಾಯಕ ಕಾರ್ಯಪಾಲಕ ಅಭಿಯಂತರರು – ಕಾರ್ಯಪಾಲಕ ಅಭಿಯಂತರರು – ಅಧೀಕ್ಷಕ ಅಭಿಯಂತರರು – ಮುಖ್ಯ ಅಭಿಯಂತರರು – ಜಂಟಿ ಆಯುಕ್ತರು – ವಲಯ ಆಯುಕ್ತರು – ಸಂಬಂಧಪಟ್ಟ ವಿಶೇಷ ಆಯುಕ್ತರು – ಮುಖ್ಯ ಲೆಕ್ಕಾಧಿಕಾರಿಗಳ ಕಛೇರಿಯ ವರೆಗೆ ಪ್ರತೀ ಹಂತದಲ್ಲಿ ನಿಗದಿಯಾಗಿರುವ ಅವರವರ ಪಾಲಿನ ಕಮಿಷನ್ ಹಣವನ್ನು ಪಾವತಿಸಿದ ನಂತರವಷ್ಟೇ ಪ್ರತಿಯೊಂದು ಕಡತವು ಆಯಾ ಹಂತಗಳನ್ನು ದಾಟಿ ಮುಂದಿನ ಹಂತಕ್ಕೆ ಹೋಗುತ್ತಿರುವುದು ಪಾಲಿಕೆಯ ವಿಷಯ ಬಲ್ಲ ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವಾಗಿದೆ.
* ಕಾಮಗಾರಿಗೆ ಸಂಬಂಧಿಸಿದ ಒಟ್ಟು ಮೊತ್ತದ ಪೈಕಿ ಶೇ. 50% ರಿಂದ 60% ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಪಾವತಿಸಲೇ ಬೇಕಾದ ಸ್ಥಿತಿಯಲ್ಲಿರುವ ಗುತ್ತಿಗೆದಾರ ಅಂತಿಮವಾಗಿ ಇನ್ನುಳಿದ ಶೇ. 40% ರಿಂದ 50% ರಷ್ಟು ಹಣದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಿ, ತನ್ನ ಪಾಲಿನ ಲಾಭವನ್ನು ಎದುರು ನೋಡಬೇಕಾದ ದೈನೇಸಿ ಪರಿಸ್ಥಿತಿ ಗುತ್ತಿಗೆದಾರರಿಗೆ ಉಂಟಾಗಿದೆ.
02) ಡಾಂಬರೀಕರಣ ಕಾರ್ಯ ಮತ್ತು ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಕಳಪೆ ಗುಣಮಟ್ಟದ ಕಚ್ಛಾ ವಸ್ತುಗಳ ಬಳಕೆ :
* ಬೆಂಗಳೂರಿನಂತಹ ಮಹಾನಗರದಲ್ಲಿ ಡಾಂಬರೀಕರಣ ಕಾಮಗಾರಿ ಮಾಡಬೇಕಾದಲ್ಲಿ, Monsoon Season (ಮಳೆಗಾಲ) (ಜೂನ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ) ನಲ್ಲಿ ಡಾಂಬರೀಕರಣ ಮಾಡುವ ಹಾಗಿಲ್ಲ.
* ಡಾಂಬರೀಕರಣ ಮಾಡಲು ತಂದ ಡಾಂಬರಿನ ತಾಪಮಾನ ಕನಿಷ್ಠ 110 ° ಯಿಂದ 140 ° ವರೆಗೆ ಕಡ್ಡಾಯವಾಗಿ ಇರಲೇಬೇಕಿರುತ್ತದೆ.
* ಕಚ್ಛಾ ವಸ್ತುಗಳಿಗೆ ಬಳಸಲ್ಪಡುವ Bitumen ಪ್ರಮಾಣ ಶೇ. 5.4% ರಿಂದ ಶೇ. 6% ರಷ್ಟು ಇರಬೇಕಿರುತ್ತದೆ. ಹಾಗೆಯೇ Bitumen Concrete (BC) ಮತ್ತು Dust ನ ಪ್ರಮಾಣ ಗರಿಷ್ಠ 12 mm ರಿಂದ ಕನಿಷ್ಠ 06 mm ವರೆಗೆ ಇರಬೇಕಿರುತ್ತದೆ.
* DBM (Dense Bituminous Macadam) 12 ರಿಂದ 20 ಇರಬೇಕಿರುತ್ತದೆ.
* ಡಾಂಬರು ಮಿಶ್ರಣಕ್ಕೆ ಕಡ್ಡಾಯವಾಗಿ Viscosity Grading (VG – 10) ಗುಣಮಟ್ಟದ Emulsion ಗಳನ್ನೇ ಬಳಸಬೇಕಿರುತ್ತದೆ. ಉದಾಹರಣೆಗೆ Hincol, IOCL, Bharath ಈ ರೀತಿಯ Emulsion ಗಳನ್ನು ಬಳಸಬೇಕಿರುತ್ತದೆ.
* ಹಾಗೆಯೇ, White Topping ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಕಡ್ಡಾಯವಾಗಿ Birla Ultratech Cement ಅನ್ನೇ ಉಪಯೋಗಿಸಬೇಕೆಂಬ ಅಥವಾ M – 40 Grade Cement Concrete Mix ಅನ್ನೇ ಉಪಯೋಗಿಸಬೇಕೆಂಬ ನಿಯಮಗಳಿದ್ದರೂ ಸಹ ಬಿಬಿಎಂಪಿಯಲ್ಲಿ ತಾಂಡವವಾಡುತ್ತಿರುವ ಅತಿಯಾದ ಭ್ರಷ್ಟಾಚಾರದಿಂದಾಗಿ ಸ್ವಲ್ಪಮಟ್ಟಿಗಾದರೂ ಲಾಭವನ್ನು ಎದುರು ನೋಡಬೇಕಾದ ಗುತ್ತಿಗೆದಾರರು ಸಹಜವಾಗಿಯೇ ಹೊಸಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ತಲೆ ಎತ್ತಿರುವ ಹತ್ತಾರು RMC ಘಟಕಗಳಿಂದ M – 20 Grade Cement Concrete Mix ಗಳನ್ನು ಬಳಸುತ್ತಿರುವುದರಿಂದ ಕಳೆದ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ White Topping ರಸ್ತೆಗಳು ನಿರ್ಮಾಣವಾಗುತ್ತಿರುವುದು.
* ಬೂದು ಬಣ್ಣದಲ್ಲಿರಬೇಕಾದ White Topping ರಸ್ತೆಗಳು ಕಾಮಗಾರಿ ಪೂರ್ಣಗೊಂಡ ಕೆಲವೇ ವಾರಗಳಲ್ಲಿ ಬಿಳಿಯ ಬಣ್ಣಕ್ಕೆ ತಿರುಗುತ್ತಿರುವುದನ್ನು ನೋಡಿದರೆ ಸದರಿ ಕಾಮಗಾರಿಯಲ್ಲಿ ಬಳಸಿರುವುದು M – 20 Grade Cement Concrete Mix ಎಂದು ಎಂತಹ ಶತ ಮೂರ್ಖನಿಗಾದರೂ ಅರ್ಥವಾಗುವ ವಿಷಯವಾಗಿರುತ್ತದೆ.
1,980 ಕಿ. ಮೀ. ಉದ್ದದ Arterial ಮತ್ತು Sub Arterial ರಸ್ತೆಗಳು ಹಾಗೂ ಸುಮಾರು 13,400 ಕಿ. ಮೀ. ಉದ್ದದ ವಾರ್ಡ್ ಮಟ್ಟದ ರಸ್ತೆಗಳನ್ನು ಒಳಗೊಂಡಿರುವ ಬಿಬಿಎಂಪಿಯ ಪ್ರತೀ ರಸ್ತೆಯಲ್ಲಿ ನೂರಾರು ಗುಂಡಿಗಳು. ಎಲ್ಲಿ ನೋಡಿದರೂ ಕೇವಲ ರಸ್ತೆಗುಂಡಿಗಳೇ ಕಾಣುತ್ತವೆಯೇ ಹೊರತು ಸುಸ್ಥಿತಿಯಲ್ಲಿರುವ ರಸ್ತೆಗಳು ಕಾಣ ಸಿಗುವುದೇ ಇಲ್ಲ !!!
ಸ್ವಂತ ಪ್ರಯೋಗಾಲಯವೇ ಇಲ್ಲ !!!
ಪ್ರತೀ ವರ್ಷ ಕನಿಷ್ಠ ಏಳೆಂಟು ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಪಾಲಿಕೆಯ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಮಾಡುವ ಡಾಂಬರೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ, ಡಾಂಬರೀಕರಣಕ್ಕೆ ಬಳಸುವ ಕಚ್ಛಾ ವಸ್ತುಗಳ ಗುಣಮಟ್ಟದ ಪರಿಶೀಲನೆಗೆ ಒಂದೇ ಒಂದು ಪ್ರಯೋಗಾಲಯವನ್ನೂ ಹೊಂದಿರುವುದಿಲ್ಲ ಎಂಬುದು ವಿಪರ್ಯಾಸ !!!
ನೆರೆಯ ತೆಲಂಗಾಣ ರಾಜ್ಯದ ಹೈದರಾಬಾದ್ ಅಥವಾ ಮಹಾರಾಷ್ಟ್ರ ರಾಜ್ಯದ Pune ನಗರಗಳಲ್ಲಿರುವ ಪ್ರಯೋಗಾಲಯಗಳನ್ನೇ ಅವಲಂಭಿಸಬೇಕಾದ ದೈನೇಸಿ ಸ್ಥಿತಿಯಲ್ಲಿ ಬಿಬಿಎಂಪಿ ಇರುತ್ತದೆ !!!
ಕೇವಲ ಎರಡರಿಂದ ಮೂರು ಕೋಟಿ ರೂಪಾಯಿಗಳ ವೆಚ್ಛದಲ್ಲಿ ಡಾಂಬರೀಕರಣ ಕಾರ್ಯಕ್ಕೆ ಬಳಸುವ ಕಚ್ಛಾ ವಸ್ತುಗಳ ಗುಣಮಟ್ಟದ ಪರೀಕ್ಷೆಗೆ ಸಂಬಂಧಿಸಿದ ಪ್ರಯೋಗಾಲಯವನ್ನು ನಿರ್ಮಿಸಬಹುದಾಗಿದ್ದು, ಈ ಕಾರ್ಯವನ್ನು ಮಾಡಲೂ ಸಹ ಪಾಲಿಕೆಯು ಇದುವರೆಗೆ ಸಣ್ಣ ಪ್ರಯತ್ನವನ್ನೂ ಮಾಡಿರುವುದಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಪಾಲಿಕೆಯ “ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ”, “ಯೋಜನೆ (ಕೇಂದ್ರ) ಇಲಾಖೆ” ಮತ್ತು “ವಿಭಾಗಮಟ್ಟದ ಕಾರ್ಯಪಾಲಕ ಅಭಿಯಂತರರ ಕಛೇರಿ”ಗಳಲ್ಲಿ ನಡೆಯುತ್ತಿರುವ ವ್ಯಾಪಕವಾದ ಭ್ರಷ್ಟಾಚಾರ ಹಾಗೂ ವಂಚಕ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಈ ಅಧಿಕಾರಿಗಳು ನಡೆಸುತ್ತಿರುವ ದೊಡ್ಡ ಲೂಟಿ ಕಾರ್ಯಗಳಿಗೆ ತಡೆ ಉಂಟಾಗಬಹುದು ಎಂಬ ಏಕೈಕ ದುರುದ್ದೇಶದಿಂದಲೇ ಪಾಲಿಕೆಯು ತನ್ನದೇ ಸ್ವಂತ ಪ್ರಯೋಗಾಲಯವನ್ನು ನಿರ್ಮಿಸಿಕೊಳ್ಳುವುದಕ್ಕೆ ಹಿರಿಯ ಅಧಿಕಾರಿಗಳಿಂದ ಕಿರಿಯ ಅಧಿಕಾರಿಗಳವರೆಗೆ ಯಾರೊಬ್ಬರೂ ಅವಕಾಶ ನೀಡುತ್ತಿಲ್ಲ ಎಂಬುದು ಅಕ್ಷರಶಃ ಸತ್ಯವಾಗಿರುತ್ತದೆ !!!
ಈ ರೀತಿಯ ಅತಿಯಾದ ಭ್ರಷ್ಟಾಚಾರ ವ್ಯವಸ್ಥೆಯಿಂದಾಗಿ ಬಿಬಿಎಂಪಿಯ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿರುತ್ತದೆ. ರಾಜ್ಯ ಸರ್ಕಾರ ಮತ್ತು ಪಾಲಿಕೆಯ ಮುಖ್ಯ ಆಯುಕ್ತರು / ಹಿರಿಯ ಅಧಿಕಾರಿಗಳು ಬಿಬಿಎಂಪಿಯ ಪ್ರಮುಖ ಇಲಾಖೆಗಳಲ್ಲಿ ತಾಂಡವವಾಡುತ್ತಿರುವ ವ್ಯಾಪಕ ಭ್ರಷ್ಟಾಚಾರ ವ್ಯವಸ್ಥೆಗೆ ಕಡಿವಾಣ ಹಾಕುವ ಒಂದು ಸಣ್ಣ ಪ್ರಯತ್ನವನ್ನೂ ಸಹ ಮಾಡುತ್ತಿಲ್ಲ.
ಇಂತಹ ಅತಿಯಾದ ಭ್ರಷ್ಟಾಚಾರ ವ್ಯವಸ್ಥೆಯನ್ನು ಎದುರಿಸಲಾಗದೇ, ಸ್ಥಳೀಯ ಗುತ್ತಿಗೆದಾರರು ಪಾಲಿಕೆಯ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದು, ಕಳೆದ ಒಂದೆರಡು ವರ್ಷಗಳಿಂದೀಚೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಹ್ವಾನಿಸಲಾಗಿರುವ ಬೃಹತ್ ಮೊತ್ತದ ಕಾಮಗಾರಿಗಳಲ್ಲಿ ಯಾವೊಬ್ಬ ಸ್ಥಳೀಯ ಗುತ್ತಿಗೆದಾರನೂ ಭಾಗವಹಿಸದೇ, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ಮತ್ತು ಉತ್ತರ ಭಾರತದ ಗುತ್ತಿಗೆದಾರರು ಭಾಗವಹಿಸುತ್ತಿದ್ದು, ಅವರುಗಳಿಂದ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲದಂತಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಳಿವಿನ ಬಗ್ಗೆ ಮತ್ತು ಬಳಕೆಯಾಗುತ್ತಿರುವ ಬೃಹತ್ ಪ್ರಮಾಣದ ಸಾರ್ವಜನಿಕರ ತೆರಿಗೆ ಹಣದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಕಳೆದ 10 ವರ್ಷಗಳ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ವಿವಿಧ ಅನುದಾನಗಳ ಮೂಲಕ ಬಿಡುಗಡೆಯಾಗಿರುವ 46,292 ಕೋಟಿ 23 ಲಕ್ಷಗಳಷ್ಟು ಬೃಹತ್ ಪ್ರಮಾಣದ ಹಣ ಎಲ್ಲಿಗೆ ಹೋಯಿತು ??? ಯಾರ್ಯಾರಿಗೆ ತಲುಪಿತು ??? ಎಂಬುದರ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಅಥವಾ CBI ತನಿಖೆಗೆ ವಹಿಸುವಂತೆ ಬೆಂಗಳೂರಿನ ನಾಗರಿಕರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. ಸಿದ್ಧರಾಮಯ್ಯ ಅವರನ್ನು ಮತ್ತು ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. ಡಿ. ಕೆ. ಶಿವಕುಮಾರ್ ಅವರನ್ನು ಆಗ್ರಹಿಸಲಾಗಿದೆ.
ಹಾಗೆಯೇ, ಈ ಬೃಹತ್ ಹಗರಣದ ತನಿಖೆಯನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಅಥವಾ CBI ತನಿಖೆಗೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವಂತೆ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರನ್ನು ಹಾಗೂ ಮಾನ್ಯ ಆಡಳಿತಾಧಿಕಾರಿಗಳನ್ನು ಆಗ್ರಹಿಸಲಾಗಿದೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ವಿವಿಧ ಅನುದಾನಗಳ ಮೂಲಕ ಬಿಡುಗಡೆಯಾಗಿರುವ 46,292 ಕೋಟಿ 23 ಲಕ್ಷಗಳಷ್ಟು ಬೃಹತ್ ಪ್ರಮಾಣದ ಹಣ ಸಂಪೂರ್ಣ ದುರ್ಬಳಕೆಯಾಗಲು ಕಾರಣರಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು / ಮುಖ್ಯ ಆಯುಕ್ತರುಗಳಾಗಿದ್ದ ಲಕ್ಷ್ಮೀನಾರಾಯಣ್, IAS (Retd), ಜಿ. ಕುಮಾರ್ ನಾಯಕ್, IAS (Retd) (ಮಾನ್ಯ ಸಂಸದರು, ರಾಯಚೂರು ಲೋಕಸಭಾ ಕ್ಷೇತ್ರ), ಮಂಜುನಾಥ್ ಪ್ರಸಾದ್, IAS, ಬಿ. ಹೆಚ್. ಅನಿಲ್ ಕುಮಾರ್, IAS (Retd), ಗೌರವ್ ಗುಪ್ತ, IAS ಮತ್ತು ತುಷಾರ್ ಗಿರಿನಾಥ್, IAS ಹಾಗೂ ಇದೇ ಅವಧಿಯಲ್ಲಿ ಪಾಲಿಕೆಯ ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವ ವಿಜಯ ಭಾಸ್ಕರ್, IAS (Retd), ರಾಕೇಶ್ ಸಿಂಗ್, IAS (Retd) ಮತ್ತು ಉಮಾಶಂಕರ್, IAS ಹಾಗೂ 2013-14 ರಿಂದ 2024-25 ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ ಪಾಲಿಕೆಯ “ಯೋಜನೆ ಇಲಾಖೆ”ಯ ವಿಶೇಷ ಆಯುಕ್ತರು, ಮುಖ್ಯ ಅಭಿಯಂತರರು, “ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ”, “ಯೋಜನೆ (ಕೇಂದ್ರ) ಇಲಾಖೆ” ಮತ್ತು “08 ವಲಯ”ಗಳ ಮುಖ್ಯ ಅಭಿಯಂತರರುಗಳು, ಕಾರ್ಯಪಾಲಕ ಅಭಿಯಂತರರುಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳು, ಜಂಟಿ ಆಯುಕ್ತರುಗಳು ಹಾಗೂ ಕಳೆದ 02 ವರ್ಷಗಳಿಂದೀಚೆಗೆ ಅಧಿಕಾರ ವಹಿಸಿಕೊಂಡಿರುವ 08 ವಲಯಗಳ ವಲಯ ಆಯುಕ್ತರುಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಮತ್ತು ಈ ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ಗುತ್ತಿಗೆದಾರರ ವಿರುದ್ಧ “ಭಾರತೀಯ ನ್ಯಾಯ ಸಂಹಿತೆ, 2023” ರ ಅನ್ವಯ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ಸರ್ಕಾರಿ ಅನುದಾನ ದುರ್ಬಳಕೆ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಈ ಹಗರಣಕ್ಕೆ ಸಂಬಂಧಿಸಿದ 4,113 ಪುಟಗಳ ಸಂಪೂರ್ಣ ದಾಖಲೆಗಳನ್ನು ಸಹಿತ ಮಾನ್ಯ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿದೆ.
BREAKING : ತುಮಕೂರಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದಾರುಣ ಸಾವು!
BIG NEWS: ಸಿಎಂ ಸಿದ್ಧರಾಮಯ್ಯಗೆ ಮತ್ತೊಂದು ಶಾಕ್: ಮುಡಾ ಕೇಸಲ್ಲಿ ‘ಹೈಕೋರ್ಟ್’ನಿಂದ ನೋಟಿಸ್ | CM Siddaramaiah