ಬೆಂಗಳೂರು : ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಬಾರಿಯ ಆಯವ್ಯಯದಲ್ಲಿ ಕ್ವಾಂಟಮ್ ರೋಡ್‌ಮ್ಯಾಪ್‌ನ ಅನುಷ್ಠಾನಕ್ಕೆ 10 ಕೋಟಿ ರೂಪಾಯಿಗಳನ್ನು ಘೋಷಿಸಿರುವುದು, ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ಕ್ಷೇತ್ರದ ಕೇಂದ್ರಬಿಂದುವನ್ನಾಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ನೀಡಿರುವ ಅವರು, ಕ್ವಾಂಟಮ್ ವಲಯದಲ್ಲಿ ಕರ್ನಾಟಕವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ‘ಕ್ವಾಂಟಮ್ ಶೃಂಗಸಭೆ’ಯಲ್ಲಿ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. “ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ‘ಕರ್ನಾಟಕ ಕ್ವಾಂಟಮ್ ರೋಡ್‌ಮ್ಯಾಪ್’ನ ಮೊದಲ ಹಂತದ ಅನುಷ್ಠಾನಕ್ಕೆ ಸರ್ಕಾರವು 10 ಕೋಟಿ ರೂ. ಅನುದಾನ ಒದಗಿಸಿದೆ,” ಮುಂದಿನ ಐದು ವರ್ಷಗಳಲ್ಲಿ, ಈ ಭವಿಷ್ಯದ ವಲಯವನ್ನು ಮುನ್ನಡೆಸಲು ಅಗತ್ಯವಿರುವ ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವತ್ತ ಈ ರೋಡ್‌ಮ್ಯಾಪ್ ಗಮನ ಹರಿಸಲಿದೆ ಎಂದಿದ್ದಾರೆ.
“ಬೆಂಗಳೂರು ನಗರವು ಈಗಾಗಲೇ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ನವೋದ್ಯಮಗಳ (Startups) ಬಲಿಷ್ಠ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಅಗತ್ಯ ಮೂಲಸೌಕರ್ಯ ಮತ್ತು ನೀತಿಯನ್ನು ರೂಪಿಸುವ ಮೂಲಕ 2035ರ ವೇಳೆಗೆ ಶೇ. 20ರಷ್ಟು ಜಾಗತಿಕ ಮಾರುಕಟ್ಟೆ ಪಾಲನ್ನು ಸಾಧಿಸುವ ರಾಜ್ಯ ಸರ್ಕಾರದ ದೃಷ್ಟಿಕೋನಕ್ಕೆ ಈ ಬದ್ಧತೆಯು ಮತ್ತಷ್ಟು ಬಲ ತುಂಬಲಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಕ್ವಾಂಟಮ್ ಸಿಟಿ ನಿರ್ಮಾಣಕ್ಕಾಗಿ ಹೆಸರಘಟ್ಟದಲ್ಲಿ ಈಗಾಗಲೇ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ, ಐಐಎಸ್‌ಸಿಯಂತಹ (IISc) ವಿಶ್ವದರ್ಜೆಯ ಸಂಸ್ಥೆಗಳು, ಸುಧಾರಿತ ಕ್ವಾಂಟಮ್ ಕಂಪ್ಯೂಟರ್‌ಗಳ ಲಭ್ಯತೆ ಮತ್ತು ನಮ್ಮ ರಾಜ್ಯದ ತಾಂತ್ರಿಕ ಮಾನವ ಸಂಪನ್ಮೂಲದಿಂದಾಗಿ, ಕರ್ನಾಟಕವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಅಭೂತಪೂರ್ವ ಪ್ರಗತಿಗೆ ಸಾಕ್ಷಿಯಾಗಲಿದೆ. ನಾವು ಜಗತ್ತನ್ನೇ ಮುನ್ನಡೆಸುವ ಶಕ್ತಿಯನ್ನು ಅಭಿವೃದ್ದಿಪಡಿಸುತ್ತಿದ್ದೇವೆ,”.
ಇದಲ್ಲದೆ, 233 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ‘ವಿಜ್ಞಾನ ನಗರ’ (Science City) ಸ್ಥಾಪನೆಗೆ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿ (DPR) ಸಲ್ಲಿಸಲಾಗಿದೆ. ಜೊತೆಗೆ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಮತ್ತು ಬೀದರ್‌ನಲ್ಲಿ 24 ಕೋಟಿ ರೂ. ವೆಚ್ಚದಲ್ಲಿ 6 ನೂತನ ತಾರಾಲಯಗಳನ್ನು ನಿರ್ಮಿಸಲು ಅನುದಾನ ಒದಗಿಸಲಾಗಿದೆ.
“ತಾರಾಲಯಗಳ ಮೂಲಕ ತಳಮಟ್ಟದಲ್ಲಿ ವೈಜ್ಞಾನಿಕ ಅರಿವು ಹಾಗೂ ಕ್ವಾಂಟಮ್‌ನಂತಹ ಸುಧಾರಿತ ತಂತ್ರಜ್ಞಾನದ ಮೇಲಿನ ಹೂಡಿಕೆಯು, ಕರ್ನಾಟಕದ ವರ್ತಮಾನ ಮತ್ತು ಭವಿಷ್ಯದ ತಾಂತ್ರಿಕ ಪಾರಮ್ಯಕ್ಕೆ ಅತ್ಯುತ್ತಮ ಸೇತುವೆಯಾಗಿದೆ,” ಎಂದು ಸಚಿವ ಬೋಸರಾಜು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








