ಬೆಂಗಳೂರು : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಸೋಮವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ಪರ ಜಯನಗರ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಬ್ಬರದ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ತೇಜಸ್ವೀ ಸೂರ್ಯ, “ನವಭಾರತದ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಬಹುದೊಡ್ಡದಿದ್ದು ಅದರಂತೆ ಪ್ರಧಾನಿ ನರೇಂದ್ರಮೋದಿಯವರು ಯುವ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ರಕ್ಷಣಾ ಪಡೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಎರಡು ಪಟ್ಟು ಹೆಚ್ಚಿದೆ. ಸರ್ಕಾರದ ಪ್ರೋತ್ಸಾಹದಿಂದ ಯುವಜನರಲ್ಲಿ ಕ್ರೀಡಾಸಕ್ತಿ ಹೆಚ್ಚುತ್ತಿದ್ದು, ವಿವಿಧ ವಲಯಗಳಲ್ಲಿ ತಮ್ಮ ಪ್ರತಿಭೆ, ಸಾಮರ್ಥ್ಯ ತೋರಲು ಸಾಧ್ಯವಾಗಿದೆ. ಖೇಲೋ ಇಂಡಿಯಾ ಕಾರ್ಯಕ್ರಮ ಕ್ರೀಡಾ ವಲಯದಲ್ಲಿ ಬಹು ದೊಡ್ಡ ಬದಲಾವಣೆಯನ್ನು ತಂದಿದ್ದು, ಅಪಾರ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ಕಾರಣವಾಗಿದೆ. ಒಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಸ್ಕಿಲ್ ಇಂಡಿಯಾ,ಮೇಕ್ ಇನ್ ಇಂಡಿಯಾ, ಫಿಟ್ ಇಂಡಿಯಾ ಸೇರಿದಂತೆ ಅನೇಕ ಕಾರ್ಯಕ್ರಮಗಳಿಂದ ಯುವಜನರ ಸಬಲೀಕರಣವಾಗುತ್ತಿದೆ. ಮೋದಿಯವರು ಯುವಶಕ್ತಿಗೆ ಚೈತನ್ಯ ತುಂಬಿ, ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ” ಎಂದು ಹೇಳಿದರು.
“ದಕ್ಷ ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಅವರು ರಾಜ್ಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಜನರ ಪ್ರೀತಿ ಗಳಿಸಿದ್ದಾರೆ. ಇದೀಗ ರಾಜಕೀಯ ಪ್ರವೇಶಿಸಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎದುರಾಳಿ ಪಕ್ಷಗಳಿಗೆ ನಿದ್ದೆಗೆಡಿಸಿದ್ದಾರೆ. ಯುವ ಪ್ರತಿಭೆಗೆ ಬಿಜೆಪಿ ತಮಿಳುನಾಡಿನ ಸಾರಥ್ಯ ನೀಡಿದ್ದು, ರಾಜ್ಯದಲ್ಲಿ ಶ್ರೀ ಅಣ್ಣಾಮಲೈ ಅವರು ಪಕ್ಷವನ್ನು ಬಲಪಡಿಸಿದ್ದಾರೆ” ಎಂದು ತೇಜಸ್ವೀ ಸೂರ್ಯ ಹೇಳಿದರು.
ಅಣ್ಣಾಮಲೈ ಅವರು ಮಾತನಾಡಿ, “ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ, ತಮಿಳುನಾಡಿನ ಡಿ.ಎಂ.ಕೆ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳು. ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವುದು, ಕಾನೂನು ಸುವ್ಯವಸ್ಥೆ ಗಾಳಿಗೆ ತೂರುವುದು, ಸಮಾಜಘಾತುಕ ಶಕ್ತಿಗಳನ್ನು ಪೋಷಿಸುವುದು ಈ ಪಕ್ಷಗಳ ಕಾರ್ಯಸೂಚಿಯಾಗಿದೆ. ತಮಿಳುನಾಡಿನಲ್ಲಿ ಈ ಬಾರಿ ಹೊಸ ಅಲೆ ಸೃಷ್ಟಿಯಾಗಿದ್ದು, ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ತೇಜಸ್ವೀ ಸೂರ್ಯ ಅವರು ಚಿಕ್ಕ ವಯಸ್ಸಿನಲ್ಲೇ ಸಂಸದರಾಗಿ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಯುವಶಕ್ತಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಸೂರ್ಯ ರವರ ಕಾರ್ಯವೈಖರಿಯಿಂದ ಅತ್ಯುತ್ತಮ ಯುವ ಸಂಸದ ಗೌರವ ಸಿಕ್ಕಿದ್ದು, ಇಂತಹವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿರುವುದರಿಂದ ಬೆಂಗಳೂರಿಗೆ ಅನೇಕ ಯೋಜನೆಗಳು ಬರಲು ಸಾಧ್ಯವಾಗಿದೆ. ಬೆಂಗಳೂರಿನ ಅಭಿವೃದ್ಧಿಯ ಬಗೆಗೆ ತೇಜಸ್ವೀ ಸೂರ್ಯ ರವರಿಗೆ ಅನೇಕ ಕನಸುಗಳಿವೆ. ನನ್ನ ಸಹೋದರ ತೇಜಸ್ವೀ ಯನ್ನು ಅಧಿಕ ಮತಗಳ ಅಂತರದಿಂದ ಮತ್ತೊಮ್ಮೆ ಗೆಲ್ಲಿಸಿ, ಆಶೀರ್ವದಿಸಿ ” ಎಂದು ಹೇಳಿದರು
ಶಾಸಕರಾದ ಸಿ.ಕೆ.ರಾಮಮೂರ್ತಿ, ಉದಯ್ ಗರುಡಾಚಾರ್ ಸೇರಿದಂತೆ ಅಪಾರ ಸಂಖ್ಯೆಯ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ನೇಹ ಸಾವು ಕೇಸ್: ಕೊಲೆಗಡುಕನನ್ನು ಗಲ್ಲಿಗೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ: ಬಸವರಾಜ ಬೊಮ್ಮಾಯಿ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ