ಶಿವಮೊಗ್ಗ: ಕೆಪಿಸಿ ಭೂಮಿಯನ್ನು ಅರಣ್ಯ ಇಲಾಖೆ ಸ್ವಾಧೀನಕ್ಕೆ ಕೊಡಿ ಎಂದು ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ನೀಡಿರುವ ಹೇಳಿಕೆ ಖಂಡನೀಯವಾದದ್ದು. ಅನಂತ ಹೆಗಡೆ ಅಶೀಸರ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಜೊತೆಗೆ ಅವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅನಂತ ಹೆಗಡೆ ಅಶೀಸರ ಮಾಹಿತಿ ಇಲ್ಲದೆ ಇಂತಹ ಹೇಳಿಕೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದರು.
ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಕೆಪಿಸಿ ಒಂದಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಅದು ಮುಳುಗಡೆಯಾಗಿಲ್ಲ. ರೈತರು ಅಕ್ಕಪಕ್ಕದಲ್ಲಿ ಸಾಗುವಳಿ ಮಾಡಿ ಆ ಜಮೀನನ್ನು ತಮ್ಮ ಸ್ವಾಧೀನದಲ್ಲಿ ಇರಿಸಿಕೊಂಡಿದ್ದಾರೆ. ಅನಂತ ಹೆಗಡೆ ಅಶೀಸರ 20ಸಾವಿರ ಎಕರೆ ಕೆಪಿಸಿ ಭೂಮಿ ಇದ್ದು ಅದನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲಿ ಎಂದು ಮನವಿ ನೀಡಿದ್ದರಿಂದ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚರಗೊಂಡಿದ್ದು ರೈತರಿಗೆ ಯಾವುದೇ ಸಂದರ್ಭದಲ್ಲಿ ತೊಂದರೆ ಕೊಡಬಹುದು. ಯಾರೋ ಕೆಲವರು ನೀಡಿದ ಮಾಹಿತಿಯನ್ನೆ ಅನಂತ ಹೆಗಡೆ ಅಶೀಸರ ಸತ್ಯ ಎಂದು ನಂಬಿ ಮನವಿ ಕೊಟ್ಟಿದ್ದಾರೆ. ಇಂತಹ ಹೇಳಿಕೆ ರೈತರ ಆತಂಕಕ್ಕೆ ಕಾರಣವಾಗುತ್ತದೆ. ಬಾಯಿ ಚಪಲಕ್ಕೆ ಇಂತಹ ಹೇಳಿಕೆ ನೀಡಿದರೆ ಸ್ಥಳೀಯವಾಗಿರುವ ನಾವು ರೈತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಸರ್ಕಾರ ಕೆಪಿಸಿ ವಶಪಡಿಸಿಕೊಂಡು ಉಪಯೋಗಿಸದೆ ಇರುವ ಭೂಮಿಯನ್ನು ರೈತರಿಗೆ ವಾಪಾಸ್ ನೀಡಬೇಕು. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆಯ ಸಿಸಿಎಫ್ ಎಸ್.ಐ.ಟಿ ರಚನೆ ಮಾಡಿ ಶಿವಮೊಗ್ಗ ಜಿಲ್ಲೆಯಲ್ಲಿ 2-3 ಗುಂಟೆಯಿಮದ 5 ಎಕರೆವರೆಗೆ ರೈತರ ಜಮೀನು ವಶಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಹೊಸ ಒತ್ತುವರಿಗೆ ನಾವ್ಯಾರು ಬೆಂಬಲ ಕೊಡುವುದಿಲ್ಲ. ಆದರೆ ಹಿಂದಿನಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನು ವಶಪಡಿಸಿಕೊಳ್ಳಲು ಹೊಸ ಕಾಯ್ದೆಯನ್ನು ಜಾರಿಗೆ ತರುವ ಅಧಿಕಾರಿ ಕ್ರಮ ಖಂಡನೀಯವಾದದ್ದು. ತಕ್ಷಣ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕು. ಬಗರ್‌ಹುಕುಂ, ಅರಣ್ಯಹಕ್ಕು ವಾಸಿಗಳಿಗೆ ನೋಟಿಸ್ ಕೊಡುತ್ತಿರುವುದನ್ನು ಅರಣ್ಯ ಇಲಾಖೆ ತಕ್ಷಣ ನಿಲ್ಲಿಸಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸಾಗರ ಮತ್ತು ಹೊಸನಗರ ತಾಲ್ಲೂಕಿನಲ್ಲಿ ಸುಮಾರು 13ಸಾವಿರ ರೈತರು ಕೆಪಿಸಿ ಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈತನಕ ಉಪಯೋಗಿಸದೆ ಇರುವ ಭೂಮಿಯನ್ನು ವಾಪಾಸ್ ರೈತರಿಗೆ ಕೊಟ್ಟಿಲ್ಲ. ರೈತರಿಗೆ 25 ವರ್ಷಗಳ ಲೀಸ್ ಆಧಾರದ ಮೇಲೆ ಭೂಮಿಯನ್ನು ಕೊಡಿ ಎನ್ನುವುದು ನಮ್ಮ ಬೇಡಿಕೆಯಾಗಿದೆ. ಕೆಪಿಸಿ ಬಳಕೆ ಮಾಡಿಕೊಳ್ಳದೆ ಇರುವ ಭೂಮಿಯನ್ನು ವಾಪಾಸ್ ಅರಣ್ಯ ಇಲಾಖೆಗೆ ಕೊಡಿ ಎನ್ನುವುದೇ ಅವೈಜ್ಞಾನಿಕವಾಗಿದೆ. ಗೋಪಾಲಕೃಷ್ಣ ಬೇಳೂರು ಚುನಾವಣೆ ಪೂರ್ವದಲ್ಲಿ ತಾವು ಗೆದ್ದು ಬಂದರೆ ಕೆಪಿಸಿ ಭೂಮಿಯನ್ನು ವಾಪಾಸ್ ರೈತರಿಗೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದು ಮರೆತು ಹೋದಂತೆ ಕಾಣುತ್ತಿದೆ. ಮಾಹಿತಿಯೆ ಇಲ್ಲದೆ ಕೆಪಿಸಿ ಭೂಮಿ ಅರಣ್ಯ ವಶಪಡಿಸಿಕೊಳ್ಳಲಿ ಎಂದು ಮನವಿ ನೀಡಿರುವ ಅನಂತ ಹೆಗಡೆ ಅಶೀಸರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ಟಿ.ಡಿ.ಮೇಘರಾಜ್, ದೇವೇಂದ್ರಪ್ಪ ಯಲಕುಂದ್ಲಿ, ಬಿ.ಸಿ.ಲಕ್ಷ್ಮೀನಾರಾಯಣ, ಮೈತ್ರಿ ಪಾಟೀಲ್, ಜಿ.ಕೆ.ಭೈರಪ್ಪ, ವಿರೂಪಾಕ್ಷ, ಗಣೇಶ್ ಪ್ರಸಾದ್, ರಾಯಲ್ ಸಂತೋಷ್, ಸುಜಯ್ ಶೆಣೈ ಹಾಜರಿದ್ದರು.
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಬಗ್ಗೆ ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಅಮಿತ್ ಶಾ | Delhi Car Blast
BREAKING ; ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್’ಗಳಿಗೆ ‘ಮೂಲ ದೇಶ’ ಫಿಲ್ಟರ್ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪ








