ಮುಂಬೈ : ಮುಕೇಶ್- ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ ಹನ್ನೆರಡನೇ ತಾರೀಕಿಗೆ ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಬೈನಿಂದ 100 ಕಿಮೀ ದೂರದಲ್ಲಿರುವ ಪಾಲ್ಘರ್ ಪ್ರದೇಶದಲ್ಲಿನ ಐವತ್ತಕ್ಕೂ ಹೆಚ್ಚು ಜೋಡಿಗಳಿಗೆ, ಅದರಲ್ಲೂ ಆರ್ಥಿಕವಾಗಿ ಹಿಂದುಳಿದಂಥ ವಧು- ವರರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲಾಯಿತು.
ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ನಲ್ಲಿ ನಡೆದ ವಿವಾಹ ಸಮಾರಂಭವದಲ್ಲಿ ಈ ನೂತನ ದಂಪತಿಗಳ ಕುಟುಂಬದ ಪರವಾಗಿ ಸುಮಾರು 800 ಜನರು ಭಾಗವಹಿಸಿದ್ದರು. ಅನಂತ್- ರಾಧಿಕಾ ಮದುವೆಗೆ ಇದು ಆರಂಭಿಕ ಕಾರ್ಯಕ್ರಮವಾಗಿದ್ದು, ಮುಂದಿನ ಮದುವೆ ಋತುವಿನಲ್ಲಿ ದೇಶದಾದ್ಯಂತ ಈ ರೀತಿಯಾಗಿ ನೂರಕ್ಕೂ ಹೆಚ್ಚು ವಿವಾಹಗಳಿಗೆ ಅಂಬಾನಿ ಕುಟುಂಬದ ಬೆಂಬಲ ದೊರೆಯಲಿದೆ. ಈ ಬಗ್ಗೆ ಸಂಕಲ್ಪವನ್ನೇ ಮಾಡಿಕೊಂಡಿದ್ದಾರೆ.
ಅಂಬಾನಿ ಕುಟುಂಬವು ಈ ತನಕ ಅನುಸರಿಸಿಕೊಂಡು ಬಂದಿರುವ ಸರ್ವಕಾಲದಲ್ಲೂ ಮಾನ್ಯವಾದ ತತ್ವ ಏನೆಂದರೆ, ಮಾನವ ಸೇವೆಯೇ ಮಾಧವ ಸೇವೆ ಎಂಬುದು. ಅಂದರೆ ಮನುಷ್ಯರಿಗೆ ಮಾಡಿದಂಥ ಸೇವೆಯು ಆ ಭಗವಂತನಿಗೆ ಸೇವೆ ಮಾಡಿದಂತೆಯೇ ಸರಿ ಎಂಬುದನ್ನು ನಂಬಿಕೊಂಡು ಬಂದಿದೆ. ಈ ತತ್ವದ ಸ್ಫೂರ್ತಿಯ ಹಿನ್ನೆಲೆಯಲ್ಲಿಯೇ ತಮ್ಮ ಕುಟುಂಬದ ಯಾವುದೇ ಮುಖ್ಯ ಶುಭ ಸಮಾರಂಭಗಳಲ್ಲಿ ಇತರರಿಗೆ ಸೇವೆ ಒದಗಿಸುವ ಮೂಲಕ, ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಅಂಬಾನಿ ಕುಟುಂಬ ಜನ ಸೇವೆ ಮಾಡುತ್ತಾ ಬರುತ್ತಿದೆ.
ಅಂದ ಹಾಗೆ ಮುಂಬೈನಲ್ಲಿ ನಡೆದ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡರು ಮತ್ತು ನವ ವಿವಾಹಿತ ಜೋಡಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು, ಮತ್ತು ಈ ಮಂಗಳಕರ ಸಮಾರಂಭಕ್ಕೆ ವೈಯಕ್ತಿಕ ಸ್ಪರ್ಶವನ್ನೂ ಸೇರಿಸಿದರು.
ಇನ್ನು ಈ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಪ್ರತಿ ಜೋಡಿಗೂ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿದಂತೆ ಚಿನ್ನಾಭರಗಳನ್ನು ನೀಡಲಾಯಿತು. ಜೊತೆಗೆ ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣಗಳನ್ನು ಸಹ ನೀಡಲಾಯಿತು. ಇದರ ಜತೆಗೆ ಪ್ರತಿ ವಧುವಿಗೆ ರೂ. 1.01 ಲಕ್ಷ (ಒಂದು ಲಕ್ಷದ ಒಂದು ಸಾವಿರ) ರೂಪಾಯಿಯನ್ನು ತವರು ಮನೆಯಿಂದ ನೀಡುವಂಥ ಸ್ತ್ರೀಧನದ ರೂಪದಲ್ಲಿ ಕೊಡಲಾಯಿತು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ದಂಪತಿಗೂ ಒಂದು ವರ್ಷಕ್ಕೆ ಸಾಕಾಗುವಂಥ ದಿನಸಿ, ಗೃಹೋಪಯೋಗಿ ವಸ್ತುಗಳನ್ನು ಕೊಡಲಾಯಿತು. ಈ ಗೃಹೋಪಯೋಗಿ ವಸ್ತುಗಳಲ್ಲಿ 36 ಅಗತ್ಯ ವಸ್ತುಗಳು ಮತ್ತು ಪಾತ್ರೆಗಳು, ಗ್ಯಾಸ್ ಸ್ಟೌ, ಮಿಕ್ಸರ್ ಮತ್ತು ಫ್ಯಾನ್, ಹಾಗೆಯೇ ಹಾಸಿಗೆ ಮತ್ತು ದಿಂಬುಗಳು ಇದ್ದವು.
ಇನ್ನು ಆರಂಭದಲ್ಲಿಯೇ ತಿಳಿಸಿದಂತೆ, ವಧು-ವರರ ಕುಟುಂಬ ಸದಸ್ಯರು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸದಸ್ಯರು ಸೇರಿದಂತೆ 800 ಕ್ಕೂ ಹೆಚ್ಚು ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ನಂತರ, ಹಾಜರಿದ್ದ ಎಲ್ಲರಿಗೂ ಭವ್ಯವಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಆಹ್ವಾನಿತರು ವೀಕ್ಷಿಸಿದರು. ಈ ಹಿಂದೆ ಕೂಡ ಕುಟುಂಬದಲ್ಲಿ ಮದುವೆ ನಡೆದ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಜನರಿಗೆ ಮತ್ತು ಎನ್‌ಜಿಒಗಳ ಸಹಕಾರದೊಂದಿಗೆ ಅನ್ನ ದಾನ ಸೇವೆ ಮಾಡುತ್ತಾ ಬರುತ್ತಿದ್ದಾರೆ.
50 ಸಾವಿರ ಲಂಚ ಕೇಳಿದ ಅಧಿಕಾರಿಯನ್ನು ಸ್ಥಳದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಸಸ್ಪೆಂಡ್
Watch Video: ‘ವಿಪಕ್ಷ ನಾಯಕ ರಾಹುಲ್ ಗಾಂಧಿ’ ಒಬ್ಬ ‘ಚೈಲ್ಡ್’ ಇದ್ದಂತೆ: ಪ್ರಧಾನಿ ಮೋದಿ | PM Modi