ನೆದರ್ಲ್ಯಾಂಡ್ ನ ನೈಟ್ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬ ಹಲವಾರು ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಿದನು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಈಡೆ ನಗರದ ಪೆಟಿಕೋಟ್ ನೈಟ್ ಕ್ಲಬ್ ನಲ್ಲಿ ಈ ಘಟನೆ ನಡೆದಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಇದು ರಾಜಧಾನಿ ಆಮ್ಸ್ಟರ್ಡ್ಯಾಮ್ನಿಂದ ಸುಮಾರು 85 ಕಿ.ಮೀ ದೂರದಲ್ಲಿದೆ. ನೈಟ್ ಕ್ಲಬ್ ನಲ್ಲಿ ಜನರನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ ಎಂಬ ವರದಿಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಬಳಿ ಚಾಕು ಮತ್ತು ಆಯುಧಗಳಿವೆ. ಪೊಲೀಸರು ಸ್ಥಳಕ್ಕೆ ತಲುಪಿ ಕ್ರಮ ಕೈಗೊಂಡು ಕ್ಲಬ್ ಅನ್ನು ಸುತ್ತುವರೆದರು.
ಇದು ಭಯೋತ್ಪಾದಕ ಘಟನೆಯಲ್ಲ ಎಂದು ಡಚ್ ಪೊಲೀಸರು ಈ ಘಟನೆಯ ಬಗ್ಗೆ ಹೇಳಿದ್ದಾರೆ. ತನಿಖಾ ತಂಡಕ್ಕೆ ಅಂತಹ ಯಾವುದೇ ಸೂಚನೆ ಕಂಡುಬಂದಿಲ್ಲ. ಆರೋಪಿ ಡಚ್ ಪ್ರಜೆಯಾಗಿದ್ದಾನೆ. ಪೊಲೀಸರು ಆತನಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಸದ್ಯ ಆತ ಬಂಧನದಲ್ಲಿದ್ದಾನೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಇಡೀ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ.