ಮೈಸೂರು: ಬರ ಪರಿಹಾರ ಹಣ ಬಿಡುಗಡೆ ವಿಳಂಬ ವಿಚಾರದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮತದಾರರಿಂದ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರಿಗೆ ಬರ ಪರಿಹಾರ ನೀಡುವಂತೆ ಬಿಜೆಪಿಯ ಮೈತ್ರಿ ಪಾಲುದಾರ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೇಳಬೇಕಿತ್ತು ಎಂದು ಅವರು ಹೇಳಿದರು.
“ಅಮಿತ್ ಶಾ ಬರಲಿ ಅಥವಾ ನರೇಂದ್ರ ಮೋದಿ ಬರಲಿ ಅಥವಾ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬರಲಿ. ಯಾರಾದರೂ ಬರಲಿ. ಅಮಿತ್ ಶಾ ಉನ್ನತಾಧಿಕಾರ ಸಮಿತಿಯ ಮುಖ್ಯಸ್ಥರಾಗಿದ್ದಾರೆ, ಅವರು ಬರ ಪರಿಹಾರ ನೀಡಿದ್ದಾರೆಯೇ? ಕರ್ನಾಟಕದ ಜನರಿಂದ ಮತ ಕೇಳಲು ಅವರಿಗೆ ಯಾವ ನೈತಿಕ ಹಕ್ಕಿದೆ? ಎಂದು ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.
“ಅವರು (ಶಾ) ಬರ ಪರಿಹಾರ ನೀಡಿದ್ದಾರೆಯೇ? ಅಮಿತ್ ಶಾ ಇದರ ಅಧ್ಯಕ್ಷರಾಗಿದ್ದಾರೆ (ಉನ್ನತಾಧಿಕಾರ ಸಮಿತಿ). ಮೇಕೆದಾಟು ಯೋಜನೆಗೆ ಅನುಮತಿ, ಮಹಾದಾಯಿ ಯೋಜನೆಗೆ ಪರಿಸರ ಅನುಮತಿ, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪರಿಹಾರ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ ನೀಡಿದ್ದಾರೆಯೇ ?ಜನರು ಅವರಿಗೆ ಏಕೆ ಮತ ಹಾಕಬೇಕು? ವಾಸ್ತವವಾಗಿ ಅಮಿತ್ ಶಾ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ” ಎಂದು ಅವರು ಹೇಳಿದರು.