ಶಿವಮೊಗ್ಗ: ಸಾಗರವನ್ನು ಜಿಲ್ಲೆ ಮಾಡುವಂತೆ ಒತ್ತಾಯ, ಹೋರಾಟ, ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಿದೆ. ನಾಳೆ ಸಾಗರ ಬಂದ್ ಕೂಡ ಮಾಡೋದಕ್ಕೆ ಸಾಗರ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಹಿ ಗಾರ್ಮೆಂಟ್ಸ್ ನಿಂದ ನೌಕರರಿಗೆ ರಜೆಯನ್ನು ಘೋಷಿಸಲಾಗಿದೆ.
ಸಾಗರ ಜಿಲ್ಲಾ ಹೋರಾಟ ಸಮಿತಿಯು ಸಾಗರ ಜಿಲ್ಲೆ ಘೋಷಣೆ ಮಾಡಬೇಕು ಎಂಬುದಾಗಿ ಒತ್ತಾಯಿಸಿ ಕಳೆದ 12 ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ, ಆಗ್ರಹ ಮಾಡಿದರೂ ಸರ್ಕಾರ, ಜನಪ್ರತಿನಿಧಿಗಳು, ಯಾವುದೇ ರೀತಿ ಸ್ಪಂದನೆ ಮಾಡಿಲ್ಲ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಐತಿಹಾಸಿಕತೆಗೆ ಸಾಕ್ಷಿ ಸಾಗರ
ಸಾಗರ ಪಟ್ಟಣವು ಐತಿಹಾಸಿಕ ನಗರವಾಗಿದ್ದು, ಸಾಗರ ತಾಲ್ಲೂಕಿನ ಕೆಳದಿ ಸಂಸ್ಥಾನವು ಕ್ರಿ.ಶ 1499ರಿಂದ 1763ರವರೆಗೆ ಸುಮಾರು 265 ವರ್ಷಗ ಕಾಲ ಅರಸರಾದ ಚೌಡಪ್ಪ ನಾಯಕರಿಂದ ಸದಾಶಿವ ನಾಯಕರ, ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮಾಜಿ ಒಟ್ಟು 19 ರಾಜಮಹಾರಾಜರು 13 ಜಿಲ್ಲೆಗಳನ್ನು ಒಳಗೊಂಡು ಆಡಳಿತ ನಡೆಸಿದ ಇತಿಹಾಸವಿದೆ. ಸಾಗರ ಪ್ರಾಂತ್ಯವು ಕೆಳದಿ ಸಂಸ್ಥಾನ ಆಡಳಿತ ನಡೆಸಿದ ಐತಿಹಾಸಿಕ ಸಾಕ್ಷಿಯಾಗಿದೆ ಎಂದು ತಿಳಿಸಿದೆ.
ಸಾಗರವು ಉಪ ವಿಭಾಗ ಕಚೇರಿ ಹೊಂದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕೃಷಿ ವಿವಿ, ಸಾರಿಗೆ ಉಪ ವಿಭಾಗ, ಜಿಎಸ್ಟಿ ಕಚೇರಿ, ಮೆಸ್ಕಾಂ ಉಪ ವಿಭಾಗ, ಇಂಜಿನಿಯರ್ ಉಪ ವಿಭಾಗ, ತೂಕ ಮತ್ತು ಅಳತೆ ಕಚೇರಿ ಸೇರಿದಂತೆ ವಿವಿಧ ಕಚೇರಿಗಳು ಸಾಗರದಲ್ಲಿವೆ ಎಂದು ಹೇಳಿದೆ.
ಅಭಿವೃದ್ಧಿಗೆ ಕುಂಠಿತತೆ
ಇತ್ತೀಚಿನ ವರ್ಷಗಳಲ್ಲಿ ಸಾಗರ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಕೆಲವು ಕಾಣದ ಕೈಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ. ಸಾಗರ ನಗರ ವ್ಯಾಪ್ತಿಯಲ್ಲಿ ತ್ಯಾಗರ್ತಿ ಕ್ರಾಸ್ ನಿಂದ ಎಲ್ ಬಿ ಕಾಲೇಜಿನವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಟೆಂಡರ್ ಅವಧಿ ಮುಗಿದು 4 ವರ್ಷವಾದರೂ ಮುಗಿದಿಲ್ಲ ಎಂದಿದೆ.
ಸಾಗರದ ರಾಜ್ಯಕ್ಕೆ ಬೆಳಕು ನೀಡಲು ಅಣೆಕಟ್ಟು ನಿರ್ಮಾಣ ಮಾಡಲು ರೈತರು ತ್ಯಾಗ ಮಾಡಿದ ಕ್ಷೇತ್ರವಾಗಿದೆ. ಆದರೇ ಮುಳುಗಡೆ ಸಂತ್ರಸ್ತರಿಗೆ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರೈತರ ಕೃಷಿ ಭೂಮಿಯನ್ನು ಅರಣ್ಯ ಎಂದು ಘೋಷಿಸುತ್ತಿದ್ದಾರೆ. ನಷ್ಟ ಹೊಂದಿದ ರೈತರಿಗೆ ವಿಮೆ ಸಿಕ್ಕಿಲ್ಲ. ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಹೇಳಿದೆ.
ಸಾಗರ ಜಿಲ್ಲೆಯಾದ್ರೆ ಯಾರಿಗೆಲ್ಲ ಅನುಕೂಲ?
ಸಾಗರ ಜಿಲ್ಲೆ ಘೋಷಣೆ ಮಾಡಲು ಒತ್ತಾಯಿಸಿ ಮನವಿ, ಆಗ್ರಹ ನೀಡಿದ್ದನ್ನು ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ. ಸಾಗರ ಜಿಲ್ಲೆ ಘೋಷಣೆಯಾದರೇ 170 ಕಿಲೋಮೀಟರ್ ದೂರದಿಂದ ಓಡಾಡುವ ಜನರಿಗೆ ಸರ್ಕಾರವೇ ಜನರ ಬಳಿಗೆ ಬಂದಂತೆ ಆಗಲಿದೆ. ರಾಜ್ಯದಲ್ಲೇ ಅತೀ ಹೆಚ್ಚು ಪ್ರವಾಸಿ ತಾಣ ಹೊಂದಿರುವ ಸಾಗರವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಕಾರಣವಾಗಲಿದೆ. ಮಲೆನಾಡಿನ ಗುಡ್ಡಗಾಡು ಜನರಿಗೆ, ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶ, ಜೀವನ ಮಟ್ಟವೂ ಹೆಚ್ಚಲಿದೆ ಎಂದಿದೆ.
ನಾಳೆ ಶಾಹಿ ಗಾರ್ಮೆಂಟ್ಸ್ ನೌಕರರಿಗೆ ರಜೆ ಘೋಷಣೆ
ನಾಳೆ ಸಾಗರ ಜಿಲ್ಲೆಗೆ ಒತ್ತಾಯಿಸಿ ನಡೆಸುತ್ತಿರುವಂತ ಬಂದ್ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಹಿ ಗಾರ್ಮೆಂಟ್ಸ್ ರಜೆಯನ್ನು ಘೋಷಿಸಿದೆ. ಆ ಮೂಲಕ ಸಾಗರ ಜಿಲ್ಲಾ ಹೋರಾಟಕ್ಕೆ ಶಾಹಿ ಗಾರ್ಮೆಂಟ್ಸ್ ನಿಂದಲೂ ಬೆಂಬಲ ವ್ಯಕ್ತವಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಡೌಟ್
ನಾಳೆ ಸಾಗರ ಬಂದ್ ಮಾಡುತ್ತಿದ್ದರೂ ಶಾಲಾ-ಕಾಲೇಜುಗಳಿಗೆ ರಜೆ ಅನುಮಾನವಾಗಿದೆ. ಶಾಲೆಗಳಿಗೆ ರಜೆ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಬಿಇಓ ದೂರದ ಹಳ್ಳಿಗಳಿಂದ ಬರುವಂತ ಶಾಲಾ ಮಕ್ಕಳಿಗೆ ಸಾರಿಗೆ ಸಂಚಾರದ ವ್ಯತ್ಯಯ ಉಂಟಾಗದಲ್ಲಿ ಬಾರದಂತೆ ಆಯಾ ಶಾಲೆಗಳು ಸೂಚಿಸಲು ಹೇಳಲಾಗಿದೆ. ಅದರ ಹೊರತಾಗಿ ನಾಳೆ ಶಾಲಾ-ಕಾಲೇಜುಗಳಿಗೆ ಯಾವುದೇ ರಜೆಯನ್ನು ಸಾಗರ ಬಂದ್ ಹಿನ್ನಲೆಯಲ್ಲಿ ಘೋಷಿಸಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ನಾಳೆಯ ಬಂದ್ ಗೆ ಯಾವೆಲ್ಲ ಸಂಘಟನೆಗಳು ಬೆಂಬಲ ಗೊತ್ತಾ?
ನಾಳೆ ಸಾಗರ ಜಿಲ್ಲೆ ಮಾಡುವಂತೆ ಆಗ್ರಹಿಸಿ ಕರೆ ನೀಡಿರುವಂತ ಬಂದ್ ಗೆ ಹೋಟೆಲ್ ಮಾಲೀಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುದಾಗಿ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಎನ್ ಉಮೇಶ್ ತಿಳಿಸಿದ್ದಾರೆ. ನಾಳೆ ಸಾಗರ ಪ್ರಾಂತ್ಯ ಹೋಟೆಲ್ ಮಾಲೀಕರ ಸಂಘದಿಂದ ಹೋಟೆಲ್, ಬೇಕರಿ, ತಂಪು ಪಾನೀಯ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲಿಸುವುದಾಗಿ ಹೇಳಿದ್ದಾರೆ.
ನಾಳೆಯ ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಾಗರ ಬಂದ್ ಗೆ ಸಾಗರ ಗ್ರಾಮಾಂತರ, ನಗರ ಬಿಜೆಪಿ ಮಂಡಲವು ನೈತಿಕ ಬೆಂಬಲ ನೀಡುವುದಾಗಿ ಅಧ್ಯಕ್ಷರಾದಂತ ದೇವೇಂದ್ರಪ್ಪ, ಗಣೇಶ್ ಪ್ರಸಾದ್ ಕೆ.ಆರ್ ತಿಳಿಸಿದ್ದಾರೆ.
ಇನ್ನೂ ಸಾಗರ ಟೌನ್ ಫಾಸ್ಟ್ ಪುಡ್ ಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ, ವರ್ತಕರರು, ವಕೀಲರು, ಶರಾವತಿ ಕಣಿವೆ ಹೋರಾಟ ಸಮಿತಿ, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನಾಳೆಯ ಸಾಗರ ಬಂದ್ ಗೆ ಬೆಂಬಲ ಸೂಚಿಸಿವೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
ಬೆಳಗಾವಿ ಸುವರ್ಣಸೌಧದ ವಿಧಾನಸಭೆಯಲ್ಲಿ ಮಹತ್ವದ ನಾಲ್ಕು ತಿದ್ದುಪಡಿ ವಿಧೇಯಕ ಮಂಡನೆ
ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction








