ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಯುದ್ಧದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಭಾರತವು ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದಿಂದ ಭಾರಿ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಏಪ್ರಿಲ್ ತಿಂಗಳಲ್ಲೇ ಸುಮಾರು 1.2 ಕೋಟಿ (12 Million) ಬ್ಯಾರೆಲ್ ಕಚ್ಚಾ ತೈಲವು ಭಾರತದ ಪಶ್ಚಿಮ ಕರಾವಳಿಯನ್ನು ತಲುಪಲಿದ್ದು, ಇದು ಕಳೆದ ಆರು ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಆಮದು ಎಂದು ವರದಿಗಳು ತಿಳಿಸಿವೆ.
2020ರ ನಂತರ ವೆನೆಜುವೆಲಾದಿಂದ ಭಾರತಕ್ಕೆ ಬರುತ್ತಿರುವ ಅತಿದೊಡ್ಡ ತೈಲ ಪೂರೈಕೆ ಇದಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಯಾಗುತ್ತಿದ್ದ ತೈಲಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ, ಭಾರತವು ವೆನೆಜುವೆಲಾವನ್ನು ಪ್ರಮುಖ ಪರ್ಯಾಯವಾಗಿ ಬಳಸಿಕೊಳ್ಳುತ್ತಿದೆ.
ಅಮೆರಿಕದ ನಿರ್ಬಂಧಗಳ ಸಡಿಲಿಕೆಯ ನಂತರ, ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ವೆನೆಜುವೆಲಾದ ಸರ್ಕಾರಿ ಸ್ವಾಮ್ಯದ ‘PDVSA’ ಸಂಸ್ಥೆಯಿಂದ ನೇರವಾಗಿ ತೈಲವನ್ನು ಖರೀದಿಸುತ್ತಿದೆ. ಈಗಾಗಲೇ ಸುಮಾರು 10 ಲಕ್ಷ ಬ್ಯಾರೆಲ್ ಹೊತ್ತ ‘ಒಟ್ಟೋಮನ್ ಸಿನ್ಸೆರಿಟಿ’ ಎಂಬ ಹಡಗು ರಿಲಯನ್ಸ್‌ನ ಸಿಕ್ಕಾ ಬಂದರನ್ನು ತಲುಪಿದೆ.
ಭಾರತವು ತನ್ನ ಒಟ್ಟು ಬಳಕೆಯ ಶೇ. 88ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರಷ್ಯಾ ಮತ್ತು ಗಲ್ಫ್ ರಾಷ್ಟ್ರಗಳ ಜೊತೆಗೆ ಈಗ ವೆನೆಜುವೆಲಾದಿಂದ ಹೆಚ್ಚಿನ ತೈಲ ಬರುತ್ತಿರುವುದು ದೇಶದ ಇಂಧನ ಭದ್ರತೆಗೆ ಬಲ ತುಂಬಿದೆ.
ವೆನೆಜುವೆಲಾದ ಭಾರೀ ಕಚ್ಚಾ ತೈಲವು ಭಾರತದ ರಿಫೈನರಿಗಳಿಗೆ (ಶುದ್ಧೀಕರಣ ಘಟಕಗಳು) ಹೆಚ್ಚು ಸೂಕ್ತವಾಗಿದ್ದು, ಇದು ಇತರ ದೇಶಗಳಿಗಿಂತ ಸ್ವಲ್ಪ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ ಎಂದು ಹೇಳಲಾಗಿದೆ.








