ನವದೆಹಲಿ: ದೇಶದಲ್ಲಿ ಎದುರಾಗಿರುವ ಎಲ್‌ಪಿಜಿ (LPG) ಕೊರತೆ ಮತ್ತು ಜಾಗತಿಕ ಇಂಧನ ಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ ಸೀಮೆಎಣ್ಣೆ (Kerosene) ಮಾರಾಟ ಮಾಡಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅನುಮತಿ ನೀಡಿದೆ.
ಅಡುಗೆ ಮತ್ತು ದೀಪದ ಉದ್ದೇಶಕ್ಕಾಗಿ ಸಾರ್ವಜನಿಕರಿಗೆ ಈ ಸೌಲಭ್ಯ ಸಿಗಲಿದೆ. ವಿಶೇಷವಾಗಿ ಈ ಹಿಂದೆ ‘ಸೀಮೆಎಣ್ಣೆ ಮುಕ್ತ’ (Kerosene-free) ಎಂದು ಘೋಷಿಸಲ್ಪಟ್ಟಿದ್ದ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆ ಪುನರಾರಂಭವಾಗಲಿದೆ.
ಪ್ರತಿ ಜಿಲ್ಲೆಯಲ್ಲಿ ಗರಿಷ್ಠ ಎರಡು ಪೆಟ್ರೋಲ್ ಬಂಕ್‌ಗಳನ್ನು ಗುರುತಿಸಲಾಗುತ್ತಿದ್ದು, ಅಲ್ಲಿ ಸೀಮೆಎಣ್ಣೆ ಸಂಗ್ರಹಿಸಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಪ್ರತಿ ಗೊತ್ತುಪಡಿಸಿದ ಪೆಟ್ರೋಲ್ ಬಂಕ್‌ನಲ್ಲಿ ಗರಿಷ್ಠ 5,000 ಲೀಟರ್ ಸೀಮೆಎಣ್ಣೆಯನ್ನು ಸಂಗ್ರಹಿಸಿಡಲು ಅನುಮತಿ ನೀಡಲಾಗಿದೆ.
ಅವಧಿ: ಈ ಹೊಸ ಸಡಿಲಿಕೆಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಇರುವುದರಿಂದ, ಪರ್ಯಾಯ ಇಂಧನವಾಗಿ ಸೀಮೆಎಣ್ಣೆಯನ್ನು ಒದಗಿಸಲು ಸರ್ಕಾರ ಈ ನಿರ್ಧಾರ ಮಾಡಿದೆ.








