ಬೆಂಗಳೂರು : ರಾಜ್ಯದ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಸೇರಿದಂತೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂವಿಧಾನ ದಿನಾಚರನೆ ಅಂಗವಾಗಿ ನಡೆಯುವ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲೂ ಮಹಾತ್ಮ ಗಾಂಧೀಜಿ ಫೋಟೋ ಜೊತೆಗೆ ಡಾ.ಬಿ.ಆರ್. ಅಂಬೇಡರ್ಕ ಅವರ ಫೋಟೋವನ್ನು ಕಡ್ಡಾಯವಾಗಿ ಇಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಕುರಿತು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದು, ಜನವರಿ-26ರ ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್-15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡಲು ಸೂಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಹಾಗೂ ನವೆಂಬರ್-26ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಇನ್ನೂ ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯಗಳಲ್ಲಿ ರಾಜ್ಯದಲ್ಲಿ ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ (PM- USHA) ಯೋಜನೆಯನ್ನು ಆಯಾಯ ವಿಶ್ವವಿದ್ಯಾಲಯಗಳ ವಿಸ್ತøತ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ ಬೆಂಗಳೂರು ವಿಶ್ವವಿದ್ಯಾಲಯ (ಬೆಂಗಳೂರು), ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ), ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ), ಮಂಗಳೂರು ವಿಶ್ವವಿದ್ಯಾಲಯ (ಮಂಗಳೂರು), ಕಲಬುರಗಿ ವಿಶ್ವವಿದ್ಯಾಲಯ (ಕಲಬುರಗಿ) ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ (ಬೆಂಗಳೂರು) ಗಳಲ್ಲಿ ಕೇಂದ್ರದ ವಂತಿಕೆ ರೂ.167.86 ಮತ್ತು ರಾಜ್ಯದ ವಂತಿಕೆ ರೂ. 111.91 ಕೋಟಿ ಒಟ್ಟು ರೂ.279.77 ಕೋಟಿಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.