ನವದೆಹಲಿ : ದೆಹಲಿಯ ಮಿರಾಂಡಾ ಹೌಸ್ ಕಾಲೇಜು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ “ಭಾರತದಲ್ಲಿಯೇ ತಯಾರಿಸಲಾದ” ಜೈವಿಕ ಚಿಪ್ ಅಭಿವೃದ್ಧಿಪಡಿಸಿದೆ, ಇದು ಸೈನಿಕರಿಗೆ ಮುಂಬರುವ ಹೃದಯಾಘಾತದ ಬಗ್ಗೆ ಎಚ್ಚರಿಕೆ ನೀಡಬಲ್ಲದು.
ಬಯೋಫೆಟ್ ಎಂದು ಕರೆಯಲ್ಪಡುವ ಈ ಸಾಧನವು ಪೋರ್ಟಬಲ್ ಸಂವೇದಕವಾಗಿದ್ದು, ಪ್ರಮುಖ ಬಯೋಮಾರ್ಕರ್’ಗಳಲ್ಲಿನ ಅಪಾಯಕಾರಿ ಬದಲಾವಣೆಗಳನ್ನ ಗುರುತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ಆರಂಭಿಕ ಎಚ್ಚರಿಕೆಗಳನ್ನ ನೀಡಲು ರಕ್ತದ ಸೀರಮ್’ನ್ನ ವಿಶ್ಲೇಷಿಸುತ್ತದೆ.
ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ಮೋನಿಕಾ ತೋಮರ್, ಸಾಧನದ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿದರು : “ನಾವು ಅಭಿವೃದ್ಧಿಪಡಿಸಿರುವ ಸಾಧನ ಬಯೋಫೆಟ್, ಇದು ರಕ್ತದ ಮಾದರಿಯಿಂದ ಏಕಕಾಲದಲ್ಲಿ ಮೂರು ಜೈವಿಕ ಅಣುಗಳನ್ನ ಪತ್ತೆ ಮಾಡುತ್ತದೆ” ಎಂದರು.
ಈ ಜೈವಿಕ ಅಣುಗಳು “ಹೃದಯ ಸ್ತಂಭನಕ್ಕೆ ನೇರವಾಗಿ ಸಂಬಂಧಿಸಿವೆ” ಮತ್ತು ನಿಗದಿತ ಮಟ್ಟಕ್ಕಿಂತ ಹೆಚ್ಚಿದ್ದರೆ ಹೆಚ್ಚಿನ ಅಪಾಯವನ್ನ ಸೂಚಿಸುವುದರಿಂದ ಅವುಗಳನ್ನ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.








