ಬೆಂಗಳೂರು : ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಪೀಟರ್ ಕ್ಯಾಡಿ ಎಂಬುವರ ಮನೆ ಮೇಲೆ ಸಿಐಡಿ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಫುಲಿಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪ ಇರುವ ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಅಧಿಕಾರಿಗಳ ತಂಡ ಬೆಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಸುಮಾರು ಹದಿನೈದು ವರ್ಷಗಳಿಂದ ಉದ್ಯಮಿಗಳಿಗೆ ವಂಚಿಸಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿರುವ ಪೀಟರ್ ಕ್ಯಾಡಿ ವಂಚನೆಗೆ ಓಳಗಾದವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ನಾಟಕವಾಡುತ್ತಿದ್ದರು ಎನ್ನಲಾಗಿದೆ.. ಈತನಿಂದ ಸುಮಾರು ಐದು ನೂರಕ್ಕೂ ಹೆಚ್ಚು ಮಂದಿ ವಂಚನೆಗೆ ಒಳಗಾಗಿದ್ದಾರೆ ಎಂದು ಸಿಐಡಿ ಅಧಿಕಾರಿಗಳ ಮೂಲಗಳ ಮಾಹಿತಿಯಾಗಿದೆ.
ಸಾಲ ಅಗತ್ಯ ಇರುವವರಿಗೆ ಗಾಳ ಹಾಕುತ್ತಿದ್ದ ಪೀಟರ್ ಕ್ಯಾಡಿ, ತಾನು ಬ್ಯಾಂಕ್ ಬಡ್ಡಿಗಿಂತಲೂ ಕಡಿಮೆಗೆ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ಅರಂಭದಲ್ಲಿ ಈತ ಕೋಟ್ಯಂತರ ರೂಪಾಯಿ ಮೊತ್ತದ ಡಿಡಿಯನ್ನು ಉದ್ಯಮಿಗಳ ಹೆಸರಿನಲ್ಲಿ ತೆಗೆದುಕೊಂಡು ತೋರಿಸುತ್ತಿದ್ದ. ಪೀಟರ್ ಕ್ಯಾಡಿ ಮತ್ತು ಆತನ ಗ್ಯಾಂಗ್ ನ ನಾಟಕಕ್ಕೆ ಮಾರು ಹೋಗುತ್ತಿದ್ದ ಮಂದಿ ಅತನನ್ನು ನಂಬಿ ಖಾಲಿ ಚೆಕ್ ಹಾಳೆ ಮತ್ತು ಆಸ್ತಿ ಪತ್ರಗಳನ್ನು ನೀಡುತ್ತಿದ್ದರು.
ಈ ಹಂತದಲ್ಲಿ ಕೋಟಿ- ಕೋಟಿ ಮೊತ್ತವನ್ನ ಪ್ರೊಸೆಸಿಂಗ್ ಫೀ ಮತ್ತು ಕಮೀಷನ್ ಅಂತ ಪಡೆದುಕೊಂಡು ಲೋನ್ ಕೊಡದೇ ಮೋಸ ಮಾಡುತ್ತಿದ್ದ. ಯಾರಾದರು ಕೊಟ್ಟ ಹಣ ವಾಪಸು ನೀಡುವಂತೆ ಕೇಳಿದರೆ ಅವರ ವಿರುದ್ಧ ಅವರೇ ಈ ಹಿಂದೆ ನೀಡಿದ್ದ ಚೆಕ್ ಮತ್ತು ಅಸ್ತಿ ಪತ್ರಗಳನ್ನು ದುರ್ಬಳಕೆ ಮಾಡಿಕೊಡಿಕೊಂಡು ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ.
ಯಾರಾದರೂ ಕಚೇರಿಗೆ ಭೇಟಿ ನೀಡಿ ಹಣ ವಾಪಸು ಕೇಳಿದರೆ, ಅಶ್ವಿನಿ ಎಂಬಾಕೆಯ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದು, ಹಲವಾರು ಮಂದಿಯ ವಿರುದ್ಧ 15 ಕ್ಕಿಂತಲೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪೀಟರ್ ಕ್ಯಾಡಿ, ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಫ್ , ಚಾರಿ ಮುರಳಿ ಇನ್ನಿತರ ಪಟಾಲಂ ಕಟ್ಟಿಕೊಂಡಿರುವ ಪೀಟರ್ ಕ್ಯಾಡಿ ವಂಚನೆ ಮಾಡುತ್ತಿದ್ದ. ಈತನ ವಿರುದ್ಧದ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಸುಬ್ಬರಾವ್ ಗೆ 1 ಕೋಟಿ ನಾಮ : ಕಳೆದ ವರ್ಷ ಸುಬ್ಬರಾವ್ ಎಂಬಾತ ಪೀಟರ್ ಕ್ಯಾಡಿ ವಿರುದ್ಧ ಫುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಸುಬ್ಬರಾವ್ ಅವರ ಜಮೀನು ದಾಖಲೆ ಸರಿಪಡಿಸಿ ಅದನ್ನು 300 ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಡುವುದಾಗಿ ನಂಬಿಸಿ 96 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ ಪೀಡರ್ ಕ್ಯಾಡಿ ಆ ಬಳಿಕ ಮೋಸ ಮಾಡಿದ್ದರು ಎನ್ನಲಾಗಿದೆ.
ಕಮೀಷನ್ ಹೆಸರಿನಲ್ಲಿ ಸುಬ್ಬರಾವ್ ಬಳಿ ಚೆಕ್ ಪಡೆದಿದ್ದ ಪೀಟರ್ ಕ್ಯಾಡಿ ಮೋಸ ಮಾಡಿ ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಕೇಸು ದಾಖಲಿಸಿ ಕಿರುಕುಳ ನೀಡಿದ್ದ. ಈ ಬಗ್ಗೆ ಸಬ್ಬರಾವ್ ಅವರು ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿಂದೆಯೂ ಹಲವು ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಸುಬ್ಬರಾವ್ ಪ್ರಕರಣದ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಪೀಟರ್ ಕ್ಯಾಡಿ ಮನೆಯ ಮೇಲೆ ಸಿಐಡಿ ಅಧಿಕಾರಿಗಳ ತಂಡವು ದಾಳಿ ಮಾಡಿ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ದಾಖಲೆಯನ್ನು ಜಪ್ತಿ ಮಾಡಿದೆ. ಆ ಮೂಲಕ ತನಿಖೆಯನ್ನು ಚುರುಕುಗೊಳಿಸಿದೆ.
ಈತನ ವಿರುದ್ಧ ಬೆಂಗಳೂರಿನ ಅಶೋಕನಗರ, ಜೀವನ್ ಭೀಮಾನಗರ, ಹಲಸೂರು, ಫುಲಿಕೇಶಿನಗರ, ಬೆಳ್ಳಂದೂರು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಅಚ್ಚರಿ ಏನೆಂದರೆ ಈತನಿಂದ ವಂಚನೆಗೆ ಒಳಗಾದವರು ಹಣ ವಾಪಸು ಕೇಳದಂತೆ ಕಿರುಕುಳ ನೀಡುವ ಸಲುವಾಗಿ 300 ಕ್ಕೂ ಹೆಚ್ಚು ಸುಳ್ಳು ಚೆಕ್ ಬೌನ್ಸ್ ಕೇಸು ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈತನಿಂದ ವಂಚನೆಗೆ ಒಳಗಾದವರು ಸಿಐಡಿ ಆರ್ಥಿಕ ಅಪರಾಧ ದಳವನ್ನು ಸಂಪರ್ಕಿಸಬಹದು.








