ಮಂಗಳೂರು : ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ “ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ -2026” ದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಮಾವೇಶ -2026 ರಲ್ಲಿ ಬಂಡವಾಳ ಹೂಡಿಕೆ ಮಾಡಲು ಲೆಟರ್ ಆಫ್ ಇಂಟೆಂಟ್ ಗೆ ಅನೇಕರು ಸಹಿ ಹಾಕಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗುವವರಿಗೆ ಸರ್ಕಾರ ನೆರವಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿರುವ ಜಿಲ್ಲೆಗಳು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರವಾಸೋದ್ಯಮ ನೀತಿ ರೂಪಿಸಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ಅನೇಕ ಸ್ಥಳಗಳಲ್ಲಿದ್ದು, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. 2024 ರಿಂದ 29ರ ವರೆಗೆ ಐದು ವರ್ಷಗಳ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗಿದೆ.
ಸುಮಾರು 320 ಕಿಮೀ ಕರಾವಳಿ ಪ್ರದೇಶವಿದ್ದರೂ, ಇಲ್ಲಿಯವರೆಗೆ ಅದನ್ನು ಪ್ರವಾಸೋದ್ಯಮಕ್ಕೆ ಸೂಕ್ತವಾಗಿ ಬಳಸಿಕೊಂಡಿಲ್ಲ. ಜಾಗತಿಕವಾಗಿ ಗುರುತಿಸಲ್ಪಟ್ಟ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಸರ್ಕಾರ ಆಸಕ್ತಿ ವಹಿಸಿದೆ.
ಈ ಭಾಗದಲ್ಲಿ ಬ್ಯಾಂಕಿಂಗ್, ಶಿಕ್ಷಣ ಮತ್ತು ಆರೋಗ್ಯಕ್ಕೆ ವಿಶೇಷವಾಗಿ ಆದ್ಯತೆ ನೀಡಿ ಅಭಿವೃದ್ಧಿಯಾಗಿದೆ. ಕರಾವಳಿಯ ಸರಾಸರಿ ಸಾಕ್ಷರತಾ ಪ್ರಮಾಣ 2011ರಲ್ಲಿ 88.56% ಇತ್ತು. ತೆರಿಗೆ ಕೊಡುವುದರಲ್ಲಿ ನಮ್ಮ ರಾಜ್ಯ ಮುಂದಿದೆ. ಜಿ ಎಸ್.ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿದ್ದು, ಇದರಲ್ಲಿ ಕರಾವಳಿ ಜಿಲ್ಲೆಗಳ ಪಾತ್ರ ಹಿರಿದಿದೆ. ಬೆಂಗಳೂರು ಬಿಟ್ಟರೆ ಮಂಗಳೂರು ಹೆಚ್ಚಿನ ಕೊಡುಗೆ ನೀಡುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಮಹಾರಾಷ್ಟ್ರವನ್ನು ಹಿಂದಿಕ್ಕುವ ಅವಕಾಶ ನಮಗಿದೆ.
ಮಂಗಳೂರಿಗೆ ಓದಲೆಂದು ದೇಶವಿದೇಶಗಳಿಂದ ಬರುತ್ತಾರೆ. ಆದರೆ ಇಲ್ಲಿನ ಜನ ಅರಬ್ ದೇಶಗಳಿಗೆ ಕೆಲಸ ಅರಸಿಕೊಂಡು ಹೋಗುವ ಪರಿಸ್ಥಿತಿ ಇರುವುದು ವಿಷಾದನೀಯ. ಇಲ್ಲೇ ಉಳಿದುಕೊಂಡು ದುಡಿಮೆ ಮಾಡುವ ಪ್ರಯತ್ನ ಮಾಡುವುದು ಅವಶ್ಯ.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಮಂಗಳೂರಿನಲ್ಲಿ ಪಂಚತಾರ ಹೋಟೆಲ್ ಸ್ಥಾಪಿಸಲು ಪ್ರಕಾಶ್ ಶೆಟ್ಟರು ಮುಂದಾಗಿರುವುದು ಶ್ಲಾಘನೀಯ.
ಪ್ರವಾಸೋದ್ಯಮ ಬೆಳೆಯಲು ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿರುವುದು ಸ್ವಾಗತಾರ್ಹ. ಧರ್ಮ, ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಒಂದು ಧರ್ಮದ ಮೇಲೆ ಮತ್ತೊಂದು ಧರ್ಮವನ್ನು ಎತ್ತಿ ಕಟ್ಟುವುದರಿಂದ ದೇಶಭಕ್ತಿ ಬರುವುದಿಲ್ಲ. ದೇಶದಲ್ಲಿರುವ ಎಲ್ಲಾ ಧರ್ಮಗಳು ಪ್ರೀತಿಯನ್ನೇ ಸಾರುತ್ತವೆಯೇ ಹೊರತು ದ್ವೇಷ ಸಾರುವುದಿಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಕುವೆಂಪು ಅವರು ಹೇಳಿದಂತೆ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು.
ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಎಲ್ಲಾ ಮಾಧ್ಯಮಗಳು ಮಾಡಬೇಕು. ದಕ್ಷಿಣ ಕನ್ನಡದ ಜನ ಸಾಹಸ ಪ್ರವೃತ್ತಿಯಿರುವವರು. ಸ್ಥಳೀಯವಾಗಿ ಉದ್ಯಮಗಳನ್ನು ಸ್ಥಾಪಿಸಬೇಕು. ನಮ್ಮಲ್ಲಿ ಯಾವುದೇ ಕೊರತೆಗಳಿಲ್ಲ, ಬಂಡವಾಳ ಹೂಡಿಕೆಗೆ ಆಸಕ್ತಿಯ ಅಗತ್ಯವಿದೆ ಅಷ್ಟೆ ಎಂದರು.
ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ.
ಪ್ರವಾಸೋದ್ಯಮ ಸಮಾವೇಶ -2026 ರಲ್ಲಿ ಬಂಡವಾಳ ಹೂಡಿಕೆ ಮಾಡಲು ಲೆಟರ್ ಆಫ್ ಇಂಟೆಂಟ್ ಗೆ ಅನೇಕರು ಸಹಿ ಹಾಕಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗುವವರಿಗೆ ಸರ್ಕಾರ ನೆರವಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು… pic.twitter.com/ivu2fMZ3nw— Siddaramaiah (@siddaramaiah) January 10, 2026








