ಸೆವಾಸ್ಟೊಪೋಲ್:ರಷ್ಯಾದ ವಾಯುಪಡೆಗೆ ಸೇರಿದ AN-26 ಸರಕು ಸಾಗಣೆ ಸೇನಾ ವಿಮಾನವು ಕ್ರಿಮಿಯಾ ಪರ್ಯಾಯ ದ್ವೀಪದ ಸಮೀಪ ಪತನಗೊಂಡಿದೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 29 ಮಂದಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಖಚಿತಪಡಿಸಿದೆ.
ರಷ್ಯಾದ ನಿಯಂತ್ರಣದಲ್ಲಿರುವ ಕ್ರಿಮಿಯಾದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ವಿಮಾನವು ಪತನಗೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವಿಮಾನವು ಇಳಿಯುವ ಹಂತದಲ್ಲಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.ವಿಮಾನದಲ್ಲಿದ್ದ ಆರು ಮಂದಿ ಸಿಬ್ಬಂದಿ ಮತ್ತು 23 ಸೇನಾ ಅಧಿಕಾರಿಗಳು ಸೇರಿದಂತೆ ಒಟ್ಟು 29 ಜನರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಯಾರೊಬ್ಬರೂ ಬದುಕುಳಿದಿಲ್ಲ ಎಂದು ರಷ್ಯಾ ತಿಳಿಸಿದೆ.
ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ರಷ್ಯಾದ ಮಿಲಿಟರಿ ತನಿಖಾ ಸಮಿತಿಯು ತನಿಖೆ ಆರಂಭಿಸಿದೆ. ಇದು ತಾಂತ್ರಿಕ ದೋಷವೇ ಅಥವಾ ಶತ್ರು ರಾಷ್ಟ್ರಗಳ ದಾಳಿಯೇ ಎಂಬ ಬಗ್ಗೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.ಆಂಟೊನೊವ್ AN-26 ವಿಮಾನವು ರಷ್ಯಾದಲ್ಲಿ ದಶಕಗಳಿಂದ ಸರಕು ಸಾಗಣೆ ಮತ್ತು ಸೈನಿಕರ ವರ್ಗಾವಣೆಗಾಗಿ ಬಳಕೆಯಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಹಳೆಯ ಮಾದರಿಯ ವಿಮಾನಗಳು ಸರಣಿ ಅಪಘಾತಗಳಿಗೆ ಈಡಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.








